ADVERTISEMENT

ಮಂಗಳೂರು: ಎಸ್‌ಐಆರ್‌, ಯುಎಪಿಎ ರದ್ದತಿಗೆ ಆಗ್ರಹ

ಮಂಗಳೂರಿನಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯಲ್ಲಿ ನಿರ್ಣಯಗಳ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 16:03 IST
Last Updated 21 ಜನವರಿ 2026, 16:03 IST
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ಅಭಿನಂದನೆ ಸಮಾರಂಭದ ಅಂಗವಾಗಿ ಮಂಗಳೂರಿನಲ್ಲಿ ಬುಧವಾರ ಸಂಜೆ ಮೆರವಣಿಗೆ ನಡೆಯಿತು ಪ್ರಜಾವಾಣಿ ಚಿತ್ರ
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ಅಭಿನಂದನೆ ಸಮಾರಂಭದ ಅಂಗವಾಗಿ ಮಂಗಳೂರಿನಲ್ಲಿ ಬುಧವಾರ ಸಂಜೆ ಮೆರವಣಿಗೆ ನಡೆಯಿತು ಪ್ರಜಾವಾಣಿ ಚಿತ್ರ   

ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತಕ್ಷಣ ರದ್ದುಪಡಿಸಬೇಕು, ಕಾನೂನುಬಾಹಿರ ಚಟುವಟಿಕೆ (ಪ್ರತಿಬಂಧ) ಕಾಯ್ದೆಯನ್ನು ಆಮೂಲಾಗ್ರ ಬದಲಿಸಬೇಕು ಅಥವಾ ರದ್ದುಪಡಿಸಬೇಕು, ಅಲ್ಪಸಂಖ್ಯಾತರಿಗೆ ಉದ್ಯೋಗ ಅವಕಾಶ ಸೃಷ್ಟಿಸಬೇಕು ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ ಆಗ್ರಹಿಸಿದೆ.

ಇಲ್ಲಿ ಎರಡು ದಿನ ನಡೆದ ಸಮಾವೇಶದ ನಿರ್ಣಯಗಳ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ, ಯುಎಪಿಎ ಜಾರಿ ಮೂಲಕ ಪ್ರಜಾಪ್ರಭುತ್ವವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಜಿ ಅವರ ಮೇಲೆ ವೃಥಾ ಆರೋಪ ಹೊರಿಸಿ ಇ.ಡಿ ಮೂಲಕ ಬಂಧಿಸಲಾಗಿದೆ. ಅವರನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. 

ಸಮಾಜದಲ್ಲಿ ಅಸಮಾನತೆ ಇಲ್ಲವಾಗಿಸಲು ಸಮಗ್ರ ಜಾತಿ ಸಮೀಕ್ಷೆ ನಡೆಸಬೇಕು. ಅದರ ಅಧಾರದಲ್ಲೇ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಿ ಜಾರಿ ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರ ಕೈ ಹಿಡಿಯಬೇಕು, ಪ್ರಾರ್ಥನಾ ಸ್ಥಳಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಕೋಮುಸೌಹಾರ್ದ ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು. 

ADVERTISEMENT

ಪ್ಯಾಲೆಸ್ಟೀನ್–ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿ ಆ ಭಾಗದಲ್ಲಿ ಶಾಂತಿ ನೆಲೆಸಲು ಭಾರತ ತನ್ನಿಂದಾದ ಪ್ರಯತ್ನ ಮಾಡಬೇಕು, ಸ್ವತಂತ್ರ, ತತ್ವಾಧಾರಿತ, ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಬೇಕು. ಲೋಕಸಭೆ, ವಿಧಾನಸಭೆಯ ಕ್ಷೇತ್ರಗಳ ವಿಂಗಡಣೆಗೆ ಜನಸಂಖ್ಯೆಯೇ ಮಾನದಂಡ ಆಗಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ ಎಂದರು. 

ಮೊಯ್ದೀನ್ ಕುಟ್ಟಿ ಅಧ್ಯಕ್ಷ
ಮೂರು ವರ್ಷದ ಅವಧಿಗೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಮೊಯ್ದೀನ್ ಕುಟ್ಟಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಮೊಹಮ್ಮದ್ ಶಫೀ ಸಿತಾರಾಮ್‌ ಖತಿಕ್‌ ಮತ್ತು ಶೇಖ್‌ ಮಹಮ್ಮದ್. ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಸ್ರಫ್ ಮಹಮ್ಮದ್ ರಿಯಾಜ್ ಫರಂಗಿಪೇಟೆ ಕೋಶಾಧಿಕಾರಿಯಾಗಿ ಅಬ್ದುಲ್ ಸತ್ತಾರ್‌ 7 ಮಂದಿ ಕಾರ್ಯದರ್ಶಿಗಳು 28 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ಅಭಿನಂದನೆ ಸಮಾರಂಭದ ಅಂಗವಾಗಿ ಮಂಗಳೂರಿನಲ್ಲಿ ಬುಧವಾರ ಸಂಜೆ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.