ADVERTISEMENT

ನರ್ಸಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’

ಸಿಇಟಿ ಮೂಲಕ ಲಭ್ಯವಿದ್ದ 31 ಸಾವಿರ ಸೀಟುಗಳಲ್ಲಿ ಶೇ 50ಕ್ಕಿಂತ ಹೆಚ್ಚು ಉಳಿಕೆ

ಚಂದ್ರಹಾಸ ಹಿರೇಮಳಲಿ
Published 28 ಡಿಸೆಂಬರ್ 2024, 0:22 IST
Last Updated 28 ಡಿಸೆಂಬರ್ 2024, 0:22 IST
   

ಬೆಂಗಳೂರು: ಉದ್ಯೋಗದ ಖಾತರಿ ಇರುವ, ಬಹುಬೇಡಿಕೆಯ ಬಿ.ಎಸ್‌ಸಿ ನರ್ಸಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’ ಶಂಕೆ ವ್ಯಕ್ತವಾಗಿದ್ದು, ಎಂಜಿನಿಯರಿಂಗ್‌ ಕೋರ್ಸ್‌ಗಳ ತನಿಖೆ ನಡೆಸುತ್ತಿರುವ ಪೊಲೀಸರು ನರ್ಸಿಂಗ್ ಸೀಟು ಹಂಚಿಕೆಯತ್ತಲೂ ಕಣ್ಣು ನೆಟ್ಟಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024–2025ನೇ ಶೈಕ್ಷಣಿಕ ಸಾಲಿಗೆ ಹಂಚಿಕೆ ಮಾಡಿದ್ದ ನರ್ಸಿಂಗ್ ಸೀಟುಗಳಲ್ಲಿ ಶೇ 50ಕ್ಕಿಂತ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. ಹಾಗೆ ಉಳಿದ ಎಲ್ಲ ಸೀಟುಗಳೂ ಆಡಳಿತ ಮಂಡಳಿ ಕೋಟಾದ ಅಡಿ ಭರ್ತಿಯಾಗಿವೆ. ಹೊರ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವುದು ಹಗರಣದ ಶಂಕೆಗೆ ಪುಷ್ಟಿ ನೀಡಿದೆ.

ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಅಧೀನದಲ್ಲಿನ ಕಾಲೇಜುಗಳು ಸಿಇಟಿ ಅರ್ಹತಾ ಪಟ್ಟಿಯ ಆಧಾರದಲ್ಲೇ ಪ್ರವೇಶ ನೀಡುತ್ತಿದ್ದವು. ಆದರೆ, ಡೀಮ್ಡ್‌ ವಿಶ್ವವಿದ್ಯಾಲಯಗಳು, ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಾವೇ ಪ್ರತ್ಯೇಕ ಪರೀಕ್ಷೆ ನಡೆಸಿ, ಪ್ರವೇಶ ನೀಡುತ್ತಿದ್ದವು. ಕೇರಳ ಸೇರಿದಂತೆ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದರು. ಇದರಿಂದ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಬೇಕಾದಷ್ಟು ಪ್ರಾತಿನಿಧ್ಯ ಸಿಗುತ್ತಿರಲಿಲ್ಲ. 

ADVERTISEMENT

ಕರ್ನಾಟಕದ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತವಾದ ನರ್ಸಿಂಗ್‌ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ದೊರಕಬೇಕು ಎನ್ನುವ ಉದ್ದೇಶದಿಂದ ಕಳೆದ ವರ್ಷ ಸಿಇಟಿ ವ್ಯಾಪ್ತಿಗೆ ತರಲಾಗಿದೆ. ಹೊಸ ನಿಯಮದಂತೆ ಕಾಲೇಜಿಗೆ ನಿಗದಿಪಡಿಸಿರುವ ಒಟ್ಟು ಸೀಟುಗಳಲ್ಲಿ ಶೇ 20ರಷ್ಟನ್ನು ಮಾತ್ರ ಆಡಳಿತ ಮಂಡಳಿಗಳು ನೇರವಾಗಿ ಭರ್ತಿ ಮಾಡಿಕೊಳ್ಳಬಹುದು. ಶೇ 20ರಷ್ಟು ಸರ್ಕಾರಿ ಕೋಟಾ ಹಾಗೂ ಶೇ 60ರಷ್ಟು ಆಡಳಿತ ಮಂಡಳಿ ಸೀಟುಗಳನ್ನು ಕೆಇಎ ಭರ್ತಿ ಮಾಡುತ್ತದೆ.

ಸೀಟು ಉಳಿಸಲು ಹಲವು ತಂತ್ರ: ಮೊದಲು ಶೇ 80ರಷ್ಟು ಸೀಟುಗಳನ್ನು ನೇರವಾಗಿ ಭರ್ತಿ ಮಾಡಿಕೊಳ್ಳುತ್ತಿದ್ದ ಖಾಸಗಿ ಆಡಳಿತ ಮಂಡಳಿಗಳು, ಹೊರ ರಾಜ್ಯದ ವಿದ್ಯಾರ್ಥಿಗಳಿಗೇ ಮಣೆ ಹಾಕುತ್ತಿದ್ದವು. ಹಾಗಾಗಿ, ಸಿಇಟಿ ಮೂಲಕ ಬರುವ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುವುದು, ಸಣ್ಣಪುಟ್ಟ ನ್ಯೂನತೆಗಳನ್ನು ಮುಂದಿಟ್ಟು ಸೀಟು ನಿರಾಕರಿಸುವುದು, ವಂಚಕರ ಜಾಲದ ಜತೆ ಶಾಮೀಲಾಗಿ ‘ಸೀಟ್‌ ಬ್ಲಾಕಿಂಗ್‌’ ಮೂಲಕ ಅಧಿಕ ಹಣಕ್ಕೆ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ನೀಡಿರುವ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿವೆ. 

‘ಸಿಇಟಿ ಮೂಲಕ ಹಂಚಿಕೆಯಾಗಿದ್ದ ಸೀಟಿಗೆ ₹10 ಸಾವಿರ ಶುಲ್ಕವಿತ್ತು. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲೆ ಸೀಟು ದೊರೆತಿತ್ತು. ಅಲ್ಲಿ ಹೋದಾಗ ಹೆಚ್ಚುವರಿ ₹50 ಸಾವಿರ ಕಟ್ಟುವಂತೆ ಸೂಚಿಸಿದರು. ಕಾಲೇಜಿನ ಹಾಸ್ಟೆಲ್‌ನಲ್ಲೇ ಇರಬೇಕು ಎಂಬ ಷರತ್ತು ವಿಧಿಸಿದರು. ಈ ವಿಷಯವನ್ನು ಕೆಇಎ ಗಮನಕ್ಕೆ ತಂದೆ. ನಂತರ ಪೊಲೀಸರಿಗೆ ದೂರು ನೀಡಿದ್ದೇನೆ’ ಎನ್ನುತ್ತಾರೆ ವಿದ್ಯಾರ್ಥಿ ರವಿಕುಮಾರ್.

37 ನರ್ಸಿಂಗ್ ಕಾಲೇಜುಗಳಿಗೆ ಹೊಸದಾಗಿ ಅನುಮತಿ ನೀಡಿದ್ದರಿಂದ 1,315 ಸೀಟುಗಳನ್ನು ವಿಶೇಷ ಸುತ್ತಿಗೆ ಪರಿಗಣಿಸಲಾಯಿತು. ಇದು ಸಹ ಸೀಟುಗಳ ಉಳಿಕೆಗೆ ಕಾರಣ
ಎಚ್‌. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ
ಅಧಿಕ ಶುಲ್ಕ ವಸೂಲಿ ಮಾಡಿದ್ದ ಎರಡು ಹಾಗೂ ಮೂಲಸೌಕರ್ಯ ಕಲ್ಪಿಸದ 75 ನರ್ಸಿಂಗ್‌ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗಿದೆ. ದೂರು ಬಂದರೆ ಕಠಿಣಕ್ರಮ ಕ್ರಮಕೈಗೊಳ್ಳುತ್ತೇವೆ
ಎಂ.ಕೆ. ರಮೇಶ್‌, ಕುಲಪತಿ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಅನ್ಯರಾಜ್ಯದ ಮೋಹ

ರಾಜ್ಯದ ಬಹುತೇಕ ಖಾಸಗಿ ಕಾಲೇಜುಗಳು ನಾಲ್ಕು ವರ್ಷಗಳ ಬಿ.ಎಸ್‌ಸಿ ನರ್ಸಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ₹15 ಲಕ್ಷದವರೆಗೂ ಪ್ಯಾಕೇಜ್‌ ನೀಡುತ್ತಿದ್ದವು. ಹಲವು ಕಾಲೇಜುಗಳಲ್ಲಿ ಕೇರಳ ಹಾಗೂ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. 

ಮಧ್ಯವರ್ತಿಗಳ ಮೂಲಕ ಹಣ ಗಳಿಕೆಯ ವ್ಯವಹಾರ ನಡೆಸುತ್ತಿದ್ದ ಆಡಳಿತ ಮಂಡಳಿಗಳಿಗೆ ಸಿಇಟಿ ಮೂಲಕ ಭರ್ತಿ ಮಾಡಲು ಅವಕಾಶ ನೀಡಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ, ಸೀಟ್‌ ಬ್ಲಾಕಿಂಗ್‌ ಮೂಲಕ ಶೇ 50ಕ್ಕೂ ಹೆಚ್ಚು ಸೀಟುಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ತನಿಖೆಯ ನಂತರ ಮಾಹಿತಿ ಹೊರಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ‍ತಿಳಿಸಿದರು.

ಶುಲ್ಕ ನಿಯಂತ್ರಣ ಸಮಿತಿಗಿಲ್ಲ ಅಧಿಕಾರ

ವೈದ್ಯಕೀಯ, ಎಂಜಿನಿಯರಿಂಗ್‌ನಂತೆ ಬಿ.ಎಸ್‌ಸಿ ನರ್ಸಿಂಗ್‌ ಕಾಲೇಜುಗಳು ವಸೂಲಿ ಮಾಡುವ ಹೆಚ್ಚುವರಿ ಶುಲ್ಕದ ದೂರುಗಳನ್ನು ಪರಿಶೀಲಿಸುವ ಅಧಿಕಾರವನ್ನು ಸರ್ಕಾರ ಶುಲ್ಕ ನಿಯಂತ್ರಣ ಸಮಿತಿಗೆ ವಹಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಯಾರ ಬಳಿ ದೂರು ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.ಕೆಲವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ, ಕೆಲವರು ರಾಜೀವ್‌ ಗಾಂಧಿ ವಿಶ್ವವಿದ್ಯಾಲಯಕ್ಕೆ, ಕೆಲವರು ವೈದ್ಯಕೀಯ ಶಿಕ್ಷಣ ಇಲಾಖೆ ಎಡತಾಕಿದ್ದಾರೆ.

‘ಒಂದಿಬ್ಬರು ನರ್ಸಿಂಗ್‌ ಕಾಲೇಜುಗಳ ವಿರುದ್ಧ ಶುಲ್ಕ ನಿಯಂತ್ರಣ ಸಮಿತಿಗೆ ದೂರು ನೀಡಿದ್ದರು. ತಮ್ಮ ವ್ಯಾಪ್ತಿಗೆ ಬಾರದಿದ್ದರೂ, ಮಾನವೀಯ ದೃಷ್ಟಿಯಿಂದ ಅವರು ನೀಡಿದ್ದ ಶುಲ್ಕ ಹಿಂದಿರುಗಿಸಲು ಸಹಾಯ ಮಾಡಿದೆವು’ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಬಿ. ಶ್ರೀನಿವಾಸ ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.