ADVERTISEMENT

ನ.1ರಿಂದ ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 16:09 IST
Last Updated 3 ಅಕ್ಟೋಬರ್ 2025, 16:09 IST
ರಾಜ್ಯ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯೋಗ   

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ನ.1ರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಆರಂಭಿಸಲು ತೀರ್ಮಾನಿಸಿದೆ.

ಜಿಬಿಎ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯವನ್ನು ನ.30ರ ಒಳಗೆ ಮುಗಿಸಿ, ಮೀಸಲಾತಿ ಪಟ್ಟಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹಾಗಾಗಿ, ಭಾರತ ಚುನಾವಣಾ ಆಯೋಗ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯವನ್ನು ಆರಂಭಿಸುವುದನ್ನು ಕಾದು ನೋಡದೆ ತನ್ನ ಕಾರ್ಯ ಆರಂಭಿಸಲು  ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. 

ಒಂದು ವೇಳೆ ನವೆಂಬರ್‌ನಲ್ಲೇ ಎಸ್‌ಐಆರ್‌ ಆರಂಭವಾದರೆ ಎರಡು ಕಾರ್ಯಗಳನ್ನು ಒಟ್ಟಿಗೆ ನಿಭಾಯಿಸಬೇಕಾದ ಅನಿವಾರ್ಯಕ್ಕೆ ಮತಗಟ್ಟೆ ಅಧಿಕಾರಿಗಳು(ಬಿಎಲ್‌ಒ) ಸಿಲುಕಬಹುದು. ಹಾಗಾಗಿಯೇ, ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಸೆಪ್ಟೆಂಬರ್ 23ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಪತ್ರ ಬರೆದು ಕರ್ನಾಟಕದಲ್ಲಿ ಎಸ್‌ಐಆರ್ ಮುಂದೂಡಲು ವಿನಂತಿಸಿದ್ದರು. ಆದರೆ, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ.

ADVERTISEMENT

ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕರಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದೆ. 

‘ಎಸ್‌ಐಆರ್‌ ಕುರಿತ ಭಾರತ ಚುನಾವಣಾ ಆಯೋಗದ ಪ್ರತಿಕ್ರಿಯೆಗೆ ಕಾಯುವುದಿಲ್ಲ. ಅವರಿಗೆ ತಕ್ಷಣವೇ ಕಾರ್ಯ ಆರಂಭಿಸಬೇಕು ಎನ್ನುವ ಒತ್ತಡವಿಲ್ಲ. ಸುಪ್ರೀಂಕೋರ್ಟ್‌ ಸೂಚನೆಯಂತೆ ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಆರಂಭಿಸುತ್ತಿದ್ದೇವೆ. ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿ ಒದಗಿಸಬೇಕು. ನೀಡದಿದ್ದರೆ ಕೋರ್ಟ್‌ ಗಮನಕ್ಕೆ ತರುತ್ತೇವೆ. ಅಧಿಕಾರಿಗಳು ಸಹಕರಿಸದಿದ್ದರೆ ಅದನ್ನೂ ವರದಿ ಮಾಡುತ್ತೇವೆ’ ಎಂದು ಜಿ.ಎಸ್. ಸಂಗ್ರೇಶಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.