ADVERTISEMENT

ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ

ಆರ್ಯವೈಶ್ಯ ಸಮಾಜದ ವಾಸವಿ ಪೀಠ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 16:18 IST
Last Updated 20 ಜೂನ್ 2021, 16:18 IST
ವಾಸವಿ ಪೀಠದ ಗುರುಗಳಾಗಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡಿದರು – ಪ್ರಜಾವಾಣಿ ಚಿತ್ರ
ವಾಸವಿ ಪೀಠದ ಗುರುಗಳಾಗಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಆರ್ಯವೈಶ್ಯ ಸಮಾಜದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾದವಾಸವಿ ಪೀಠದ ದ್ವಿತೀಯ ಗುರುಗಳಾಗಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಭಾನುವಾರ ಪೀಠಾರೋಹಣ ಮಾಡಿದರು.

ಕೋ‌ವಿಡ್ ಕಾರಣ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ಪೀಠಾರೋಹಣ ಸಮಿತಿಯು ಮಲ್ಲೇಶ್ವರದಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಸರಳವಾಗಿ ಸಮಾರಂಭವನ್ನು ಆಯೋಜಿಸಿತ್ತು. ನಾಲ್ಕು ಗಂಟೆಗಳಿಗೂ ಅಧಿಕ ಅವಧಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಪೀಠಾರೋಹಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ವಾಸವಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಕ್ಷಣಕ್ಕೆ ವಿವಿಧ ಮಠಗಳ ಪೀಠಾಧಿಪತಿಗಳು ಕೂಡ ಸಾಕ್ಷಿಯಾದರು.

ಕೋವಿಡ್‌ ಕಾರಣ ಸಮಾರಂಭದಲ್ಲಿ ಭಕ್ತಾಧಿಗಳಿಗೆ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಬದಲಾಗಿ ಆನ್‌ಲೈನ್‌ ವೇದಿಕೆಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವೃದ್ಧಾಶ್ರಮ, ಅನಾಥಾಶ್ರಮ, ಆಸ್ಪತ್ರೆಗಳಲ್ಲಿ ಅನ್ನದಾನ ನಡೆಸಲಾಯಿತು.

ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಶಾಂತಿ ಹಾಗೂ ಸಹಬಾಳ್ವೆಗೆ ಹೆಸರಾದ ಆರ್ಯವೈಶ್ಯ ಸಮಾಜದವರು ಈ ನಾಡಿನ ಆಸ್ತಿಯಾಗಿದ್ದಾರೆ. ವ್ಯಾಪಾರ–ವ್ಯವಹಾರದಲ್ಲಿ ತೊಡಗಿರುವ ಅವರು, ಈ ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದ್ದಾರೆ. ಅವರ ಧಾರ್ಮಿಕ ಶಕ್ತಿಯಾದ ವಾಸವಿ ಪೀಠಕ್ಕೆ ದ್ವಿತೀಯ ಗುರುಗಳಾಗಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಪೀಠಾರೋಹಣ ಮಾಡಿರುವುದು ಸಂತೋಷವನ್ನುಂಟುಮಾಡಿದೆ’ ಎಂದು ತಿಳಿಸಿದರು.

ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ‘ಹಲವು ವರ್ಷಗಳಿಂದ ವಾಸವಿ ಪೀಠ ಖಾಲಿಯಿತ್ತು. ಈ ಪೀಠವು ಪುನರುತ್ಥಾನ ಆಗಬೇಕೆಂಬ ಇಚ್ಛೆಯಿದೆ. ಎಲ್ಲ ಸಂತರ ಆಶೀರ್ವಾದದಿಂದ ಸಮಾಜಕ್ಕೆ ಗೌರವ ತರುವಂತಹ ಭವ್ಯವಾದ ಪೀಠವಾಗಿ ಹೊರಹೊಮ್ಮಬೇಕಿದೆ. ಮುಂದಿನ ದಿನಗಳಲ್ಲಿ ಸೇವೆ, ಆಧ್ಯಾತ್ಮ ಹಾಗೂ ದಾಸೋಹವು ನಡೆಯಲಿದೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಲಾಗುವುದು. ಜೀವನದಲ್ಲಿ ವಿಘ್ನಗಳು ಬರುವುದು ಸಹಜ. ಒಳ್ಳೆಯ ಕಾರ್ಯಕ್ಕೆ ಎಷ್ಟೇ ವಿಘ್ನಗಳು ಬಂದರೂ ಹಿಂದೆ ಸರಿಯಬಾರದು. ವಾಸವಿ ದೇವಸ್ಥಾನಗಳು ಸಂಸ್ಕಾರ ಕೇಂದ್ರಗಳಾಗಬೇಕು. ವಿದ್ಯಾಸಂಸ್ಥೆಗಳು ಮೌಲ್ಯಯುತ ಶಿಕ್ಷಣವನ್ನು ನೀಡಬೇಕು’ ಎಂದು ಹೇಳಿದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಿನ್ಮಯಾ ಮಿಷನ್‌ನ ಸ್ವಾಮಿ ಬ್ರಹ್ಮಾನಂದ ಗುರೂಜಿ ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.