ADVERTISEMENT

ಕುರುಬ ಸಮುದಾಯದ ಹೋರಾಟಕ್ಕೆ ಜಾತ್ಯತೀತವಾಗಿ ಬೆಂಬಲ: ಎಚ್.ಎಂ.ರೇವಣ್ಣ

ಪಾದಯಾತ್ರೆಯಿಂದ ಐದು ಕೆ.ಜಿ ತೂಕ ಕಡಿಮೆ: ನಿರಂಜನಾನಂದ ಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 9:19 IST
Last Updated 30 ಜನವರಿ 2021, 9:19 IST
   

ತುಮಕೂರು: ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಕುರುಬ ಸಮುದಾಯ ಹಮ್ಮಿಕೊಂಡಿರುವ ಪಾದಯಾತ್ರೆಗೆ ಜಾತ್ಯತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.

ಕೋರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಮುದಾಯಗಳ ಮಠಾಧೀಶರು, ರಾಜಕೀಯ ನಾಯಕರು ಪಾದಯಾತ್ರೆ ಸಂದರ್ಭದಲ್ಲಿ ಬಂದು ಬೆಂಬಲ ನೀಡಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕುರುಬ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯ ಇತ್ತು. ಆದರೆ ಆ ನಂತರ ಈ ಜಾತಿ ಪಟ್ಟಿಯಿಂದ ಕೈ ಬಿಡಲಾಗಿದೆ. ಆದ್ದರಿಂದ ಮರಳಿ ಸೌಲಭ್ಯ ಪಡೆಯಲು ಈ ಹಕ್ಕೊತ್ತಾಯ ನಡೆಯುತ್ತಿದೆ ಎಂದರು.

ADVERTISEMENT

ರಾಮಕೃಷ್ಣ ಹೆಗಡೆ ಅವರು 1986ರಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಸೌಲಭ್ಯ ನೀಡಿದ್ದರು. ಆದರೆ ಯಾರೋ ಒಬ್ಬ ನ್ಯಾಯಾಲಯಕ್ಕೆ ಹೋದ ಕಾರಣ ಸೌಲಭ್ಯ ಕೈತಪ್ಪಿತು.

ಗೊಂಡ, ಜೇನುಕುರುಬ ಎಲ್ಲವೂ ಒಂದೇ ಎಂದು ಸಿದ್ದರಾಮಯ್ಯ ಅವರ ಸರ್ಕಾರ ಸಹ ಈ ಹಿಂದೆ ಹೇಳಿತ್ತು. ಈ ಎಲ್ಲ ಕಾರಣದಿಂದ ಸೌಲಭ್ಯ ಕೇಳುತ್ತಿದ್ದೇವೆ.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಿ ಎನ್ನುವುದು ನಮ್ಮ ಆಗ್ರಹ. ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಕುರುಬ, ನಾಯಕ, ಬೇಡ, ಮಲಯರನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ಕಡತ ಕೇಂದ್ರ ಸರ್ಕಾರಕ್ಕೆ ಹೋಗಿತ್ತು. ಆದರೆ ನಮಗೆ ಈ ಸೌಲಭ್ಯ ತಪ್ಪಿದೆ. ಅದನ್ನು ಸರಿಪಡಿಸಿ ಎನ್ನುತ್ತಿದ್ದೇವೆ.

ಪರಿವಾರ, ತಳವಾರರನ್ನು ಯಾವುದೇ ಕುಲಶಾಸ್ತ್ರೀಯ ಅಧ್ಯಯನ ಇಲ್ಲದೆ ಎಸ್ಟಿಗೆ ಸೇರಿಸಲಾಗಿದೆ. ಅದೇ ಪ್ರಕಾರ ನಮ್ಮನ್ನೂ ಎಸ್ಟಿಗೆ ಸೇರಿಸಬೇಕು.

ಕುಲಶಾಸ್ತ್ರೀಯ ಅಧ್ಯಯನ ಬೇಕು ಅಂದರೆ ಅದನ್ನೂ ಬೇಗ ಮಾಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.

ಈ ಹಿಂದೆ ಕುರುಬರು ಪಾದಯಾತ್ರೆ, ಹೋರಾಟ ಮಾಡಿದಾಗ ಸೌಲಭ್ಯಗಳನ್ನು ಪಡೆದಿದ್ದೇವೆ. ಈ ಹಿಂದೆ ಕನಕ ಗೋಪುರ ವಿಚಾರದಲ್ಲಿಯೂ ಹೋರಾಟ ಮಾಡಿದ ನಿದರ್ಶನ ಇದೆ.

ಈ ಹೋರಾಟದಲ್ಲಿ ನಾವು ಈಶ್ವರಪ್ಪ ಅವರನ್ನು ಈ ನಾಯಕರನ್ನಾಗಿ ಮಾಡುವುದಿಲ್ಲ. ಸಿದ್ದರಾಮಯ್ಯ ಅವರನ್ನು ಕಡೆಗಣಿಸಿಲ್ಲ ಎಂದು ಹೇಳಿದರು.

ಜನಜಾಗೃತಿ ಮೂಡಿಸುವ ವಿಚಾರದಲ್ಲಿ ಯಾರ ಅಡೆ ತಡೆಯೂ ಇಲ್ಲ.

ನಾವು ಈ ಹೋರಾಟ ಆರಂಭಿಸಿದಾಗ ವಿವಿಧ ಹಂತದ ಒಂದೂವರೆ ಸಾವಿರ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎನಿಸಿತ್ತು. ಆದರೆ ಐದು ಸಾವಿರ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಹೇಳಿದರು.

ನಾವು ವಾಲ್ಮೀಕಿ ಸಮಾಜದ ಮೀಸಲಾತಿ ಸೌಲಭ್ಯದ ವಿರೋಧಿಗಳು ಅಲ್ಲ. ಅವರಿಗೆ ಶೇ 7.5ರಷ್ಟು‌ಮೀಸಲಾತಿ ಪಡೆಯಲಿ. ಎರಡು ಸಮುದಾಯದ ನಡುವೆ ಯಾವುದೇ ತಕರಾರು ಇಲ್ಲ ಎಂದರು.

ಕುರುಬರಿಂದ ಕುರುಬರಿಗಾಗಿ ಕುರುಬರಿಗೋಸ್ಕರ ನಡೆಯುತ್ತಿರುವ ಹೋರಾಟ ಇದು. ಯಾವುದೇ ಆರ್ ಎಸ್ ಎಸ್ ಇಲ್ಲ. ಸಿದ್ದರಾಮಯ್ಯ ಅವರು ಫೆ.7 ರಂದು ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು.

ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಈ ಹೋರಾಟ 17ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ಘೋಷಿಸಿದ ಸಂದರ್ಭ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ಆತಂಕ ಇತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಜನರು ಸೇರುತ್ತಿದ್ದಾರೆ.

ಒಳ್ಳೆಯ ಸ್ವರೂಪ ಪಡೆಯುತ್ತಿದೆ. ಮಾದಾರ ಗುರು ಪೀಠ, ಭೋವಿಗುರು ಪೀಠ, ಕುಂಚಿಟಿಗ ಗುರುಪೀಠ ಸೇರಿದರಂತೆ ವಿವಿಧ ಮಠಾಧೀಶರು ಬಂದು ಬೆಂಬಲ ನೀಡಿದ್ದಾರೆ ಎಂದರು.

ಹೊಸದಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದಲ್ಲ. ಹೆಸರಿನಲ್ಲಿ ಕೆಲವು ಗೊಂದಲಗಳು ಇವೆ. ಅದನ್ನು ಸರಿಪಡಿಸಬೇಕು‌. ರಾಜ್ಯದಲ್ಲಿರುವ ಅಖಂಡ 60 ಲಕ್ಷ ಕುರುಬ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಬೇಕು.

ಐದು ಕೆ.ಜಿ. ತೂಕ ಕಡಿಮೆ: ಪಾದಯಾತ್ರೆಯಿಂದ ಐದು ಕೆ.ಜಿ. ಕಡಿಮೆ ಆಗಿದ್ದೇನೆ. ಆರೋಗ್ಯ ಚೆನ್ನಾಗಿದೆ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.