ADVERTISEMENT

ಕಂಪ್ಲಿ ಶಾಸಕ ಗಣೇಶ ಜೈಲಿನಲ್ಲೂ ಇಲ್ಲ; ಜೈಲು ಆಸ್ಪತ್ರೆಯಲ್ಲೂ ಇಲ್ಲ

ಜನಪ್ರತಿನಿಧಿಗಳ ಕೋರ್ಟ್‌ಗೆ ಶಾಸಕ ಆನಂದ ಸಿಂಗ್‌ ಹೆಚ್ಚುವರಿ ತಕರಾರು ಅರ್ಜಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 4:33 IST
Last Updated 24 ಮಾರ್ಚ್ 2019, 4:33 IST
ಜೆ.ಎನ್.ಗಣೇಶ
ಜೆ.ಎನ್.ಗಣೇಶ    

ಬೆಂಗಳೂರು: ‘ಕಂಪ್ಲಿ ಶಾಸಕ ಜೆ.ಎನ್.ಗಣೇಶ ಜೈಲಿನಲ್ಲೂ ಇಲ್ಲ ಹಾಗೂ ಜೈಲು ಆಸ್ಪತ್ರೆ ವಿಕ್ಟೋರಿಯಾದಲ್ಲೂ ಇಲ್ಲ’ ಎಂದು ದೂರಿ ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಜನಪ್ರತಿನಿಧಿಗಳ ಕೋರ್ಟ್‌ಗೆ ಹೆಚ್ಚುವರಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಆನಂದ ಸಿಂಗ್ ಪರ ಪ್ರಾಸಿಕ್ಯೂಟರ್ ಬಿ.ರಾಜೇಶ್ವರಿ ಅವರು ಶನಿವಾರ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ಕ್ಕೆ ಈ ಅರ್ಜಿ ಸಲ್ಲಿಸಿದರು.

’ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ತಕರಾರು ಅರ್ಜಿಯ ನಕಲನ್ನು ನೀಡದೆ ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ’ ಎಂಬ ಕಾರಣಕ್ಕೆ ವಿಚಾರಣೆಯ ಮುಂದಿನ ಪ್ರಕ್ರಿಯೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ADVERTISEMENT

‘ನ್ಯಾಯಾಂಗ ಬಂಧನದಲ್ಲಿದ್ದ ಗಣೇಶ ಹರ್ನಿಯಾ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಇಲ್ಲ ಎಂಬ ಮಾದ್ಯಮಗಳಲ್ಲಿನ ವರದಿಗಮನಿಸಿ ನನಗೆ ಆಘಾತವಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕಾಂಗ್ರೆಸ್‌ ಪಕ್ಷದ ಶಾಸಕರುಗಳಾದ ಗಣೇಶ ಮತ್ತು ಆನಂದ ಸಿಂಗ್‌ ಇತ್ತೀಚೆಗೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಕಾದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಗಣೇಶ ಅವರು, ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಗಣೇಶ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಮೇಲಿನ ಆದೇಶವನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಮತ್ತು ಈ ಆದೇಶವನ್ನು ಜನಪ್ರತಿನಿಧಿಗಳ ನ್ಯಾಯಾಲಯ ಇದೇ 25ಕ್ಕೆ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.