ADVERTISEMENT

ಸೆಕ್ಯುರಿಟಿ ಗಾರ್ಡ್‌ಗೆ ಮೊದಲ ರ‍್ಯಾಂಕ್‌!

ವಿಜಯನಗರ ವಿ.ವಿ ಕನ್ನಡ ಎಂ.ಎ: ರಮೇಶ್‌ ಸಾಧನೆ

ಕೆ.ನರಸಿಂಹ ಮೂರ್ತಿ
Published 15 ಮೇ 2019, 6:01 IST
Last Updated 15 ಮೇ 2019, 6:01 IST
ಮೊದಲ ರ‍್ಯಾಂಕ್‌ ವಿಜೇತ ಮಗ ರಮೇಶ್‌ಗೆ ತಾಯಿ ದೇವಮ್ಮ ಅವರ ಮೆಚ್ಚುಗೆಯ ಮುತ್ತು
ಮೊದಲ ರ‍್ಯಾಂಕ್‌ ವಿಜೇತ ಮಗ ರಮೇಶ್‌ಗೆ ತಾಯಿ ದೇವಮ್ಮ ಅವರ ಮೆಚ್ಚುಗೆಯ ಮುತ್ತು   

ಬಳ್ಳಾರಿ: ಬಡತನದ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸುವ ಸನ್ನಿವೇಶ ಎದುರಾದಾಗ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಗುಂಡೂರು ನಿವಾಸಿ ರಮೇಶ್‌ಗೆ ಕಾಣಿಸಿದ್ದು ರಾತ್ರಿ ಪಾಳಿಯ ಸೆಕ್ಯುರಿಟಿ ಗಾರ್ಡ್‌ ಕೆಲಸ.

ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕಿನ ಎಟಿಎಂನಲ್ಲಿ ಗಾರ್ಡ್‌ ಆಗಿ ತಿಂಗಳಿಗೆ ₹ 8,000 ಸಂಬಳಕ್ಕೆ ಕೆಲಸ ಮಾಡುತ್ತಲೇ ಎಸ್‌ಕೆಎನ್‌ಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿ ಅವರು, ಕನ್ನಡ ಎಂ.ಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಗಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸದಲ್ಲಿ ಚಿನ್ನದ ಪದಕದೊಂದಿಗೆ ಪ್ರಮಾಣ ಪತ್ರ ಪಡೆದಾಗ ಅವರ ಕಂಗಳಲ್ಲಿ ಸಾರ್ಥಕ ಭಾವ ಮೂಡಿತ್ತು.

ADVERTISEMENT

ಓಡಾಡಲು ಆಗದ ಪತಿ ಷಣ್ಮುಖಪ್ಪ ಅವರನ್ನು ಮನೆಯಲ್ಲೇ ಬಿಟ್ಟು ಬಂದಿದ್ದ ರಮೇಶ್ ತಾಯಿ ದೇವಮ್ಮ ಮೂಕವಿಸ್ಮಿತರಾಗಿದ್ದರು. ಹೇಳಿಕೊಳ್ಳಲು ಆಗದ ಖುಷಿಯ ಭಾವ ಅವರ ಮುಖದಲ್ಲಿತ್ತು.

ಐವರು ಮಕ್ಕಳಲ್ಲಿ ದೊಡ್ಡವರಾದ ರಮೇಶ್‌ ಅವರನ್ನು ಕಾಲೇಜಿಗೆ ಕಳಿಸಿದ ದೇವಮ್ಮ ಕೃಷಿ ಕೂಲಿ ಮಾಡುತ್ತಲೇ ಉಳಿದ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಓದಿಸುತ್ತಿದ್ದಾರೆ. ಮತ್ತೊಬ್ಬ ಪುತ್ರಿಗೆ ಮದುವೆಯಾಗಿದೆ.

‘ನಿಮ್ಮ ಸಾಧನೆಗೆ ಏನು ಪ್ರೇರಣೆ’ ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ, ರಮೇಶ್‌, ‘ಬಡತನ’ ಎಂದರು. ‘ಹೆಚ್ಚಿಗೆ ಓದುವುದು ಬೇಡ ಎಂಬ ಮನೆಯವರ ಒತ್ತಾಯ ಮೀರಿ ನಾನು ಸೆಕ್ಯುರಿಟಿಗಾರ್ಡ್‌ ಕೆಲಸಕ್ಕೆ ಸೇರಿಕೊಂಡೆ. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕೆಲಸ ಮಾಡುವ ಸಮಯದಲ್ಲೇ ಓದಿಕೊಳ್ಳುತ್ತಿದ್ದೆ. ಹಗಲಲ್ಲಿ ಕಾಲೇಜಿಗೆ ಹೋಗುತ್ತಿದ್ದೆ’ ಎಂದರು.

‘ಗುಂಡೂರಿನಲ್ಲಿ 8ನೇ ತರಗತಿಯಲ್ಲಿದ್ದಾಗಿಂದಲೇ ಗಾರೆ ಕೆಲಸ ಮಾಡುತ್ತಿದ್ದೆ. 2011ರಲ್ಲಿ ಪಿಯುಸಿ ಪಾಸಾಗುವ ಸಂದರ್ಭದಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದೆ. ಬಳಿಕ, ಕೆಲವು ತಿಂಗಳು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿದೆ. ಗಂಗಾವತಿಯಲ್ಲಿ ಪದವಿ ತರಗತಿಗೆ ಸೇರಿಕೊಂಡು, ಹಾಲು, ಪೇಪರ್‌ ಹಾಕುವ ಕೆಲಸ ಮಾಡಿದೆ. ನಂತರ ಸೆಕ್ಯುರಿಟಿಗಾರ್ಡ್‌ ಕೆಲಸಕ್ಕೆ ಸೇರಿಕೊಂಡೆ. ಬಿ.ಎ ಬಳಿಕ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಬಿ.ಇಡಿಗೆ ಸೇರಿಕೊಂಡೆ. ನಂತರ ಗಂಗಾವತಿಯಲ್ಲಿ ಎಂ.ಎ.ಗೆ ಸೇರಿಕೊಂಡು, ಸೆಕ್ಯುರಿಟಿ ಕೆಲಸವನ್ನು ಮುಂದುವರಿಸಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.