ADVERTISEMENT

ಬಾಂಗ್ಲಾದಲ್ಲೇ ಭದ್ರತೆ ಹೆಚ್ಚಿಸಬೇಕು: ರಾಮ್‌ ಮಾಧವ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:21 IST
Last Updated 16 ಆಗಸ್ಟ್ 2024, 16:21 IST
ರಾಮ್‌ ಮಾಧವ್ 
ರಾಮ್‌ ಮಾಧವ್    

ಬೆಂಗಳೂರು: ‘ಬಾಂಗ್ಲಾದೇಶದಲ್ಲಿ 1.5 ಕೋಟಿಗೂ ಹೆಚ್ಚು ಹಿಂದೂಗಳಿದ್ದಾರೆ. ಅವರನ್ನೆಲ್ಲಾ ಭಾರತಕ್ಕೆ ಕರೆತರುವುದಕ್ಕಿಂತ, ಅವರು ಅಲ್ಲೇ ಸುರಕ್ಷಿತವಾಗಿ ಇರುವಂತೆ ಮಾಡುವುದು ಒಳ್ಳೆಯದು. ಆ ಕೆಲಸವನ್ನು ಭಾರತ ಮಾಡುತ್ತಿದೆ’ ಎಂದು ಆರ್‌ಎಸ್‌ಎಸ್‌ನ ಕಾರ್ಯಕಾರಿಣಿ ಸದಸ್ಯ ರಾಮ್‌ ಮಾಧವ್‌ ಹೇಳಿದರು.

ಮಂಥನ ಬೆಂಗಳೂರು, ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಬಾಂಗ್ಲಾದೇಶದಲ್ಲಿನ ಈಚಿನ ಬೆಳವಣಿಗೆಗಳ ಕುರಿತು ಮಾತನಾಡಿದರು.

ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಾಂಗ್ಲಾದಲ್ಲಿರುವ ಹಿಂದೂಗಳನ್ನೆಲ್ಲಾ ಇಲ್ಲಿಗೆ ಕರೆತರುವ ಆಯ್ಕೆಯೂ ಇದೆ. ಆದರೆ ಕೋಟ್ಯಂತರ ಮಂದಿಗೆ ಪುನರ್ವಸತಿ ಕಲ್ಪಿಸುವುದು ಹೇಗೆ? ಇದಕ್ಕಾಗಿಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಬಾಂಗ್ಲಾದೇಶದ ಮುಖ್ಯಸ್ಥರೊಂದಿಗೆ ಮಾತನಾಡಿದ್ದರು. ಅಲ್ಲಿನ ಹಿಂದೂಗಳು ಸುರಕ್ಷಿತವಾಗಿ ಇರುವಂತೆ ಕ್ರಮ ತೆಗೆದುಕೊಳ್ಳಿ ಎಂದು ಅವರಿಗೆ ಹೇಳಲಾಗಿತ್ತು. ಹೀಗಾಗಿಯೇ ಅಲ್ಲಿನ ಹಂಗಾಮಿ ಸರ್ಕಾರ ಹಿಂದೂಗಳ ರಕ್ಷಣೆಗೆ ಕ್ರಮ ತೆಗೆದುಕೊಂಡಿದೆ’ ಎಂದರು.

ADVERTISEMENT

‘ಬಾಂಗ್ಲಾದಲ್ಲಿ ಹಿಂದೂಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆದರೂ, ಅವರಿಗೆ ಅಲ್ಲಿ ಸುರಕ್ಷತೆ ಇತ್ತು. ಶೇಖ್‌ ಹಸೀನಾ ಅವರ ಪಕ್ಷದ ಮೂಲಕವೇ 18 ಹಿಂದೂ ಸಂಸದರು ಆಯ್ಕೆಯಾಗಿದ್ದರು. ಆದರೆ ಕೆಲವು ಕೆಟ್ಟ ಗಳಿಗೆಯಲ್ಲಿ ಹೀಗಾಗಿದೆ. ‘ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯ’ದಲ್ಲಿ ಓದಿದವರು ಅಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಎಲ್ಲವೂ ಸರಿಯಾಗಲಿದೆ’ ಎಂದರು.

‘ಆರಂಭದಲ್ಲಿ ವಿದ್ಯಾರ್ಥಿಗಳ ಹೋರಾಟ ಕ್ಯಾಂಪಸ್‌ಗಳಿಗೆ ಸೀಮಿತವಾಗಿತ್ತು. ಅದನ್ನು ಹತ್ತಿಕ್ಕಿದ ಕಾರಣಕ್ಕೆ ದೇಶಕ್ಕೆಲ್ಲಾ ವ್ಯಾಪಿಸಿತು. ಹಸೀನಾ ಸರ್ಕಾರ ಆ ಹೋರಾಟವನ್ನು ಇನ್ನೂ ಉತ್ತಮವಾಗಿ ನಿರ್ವಹಿಸಬಹುದಿತ್ತು. ಪ್ರತಿಭಟನೆಯನ್ನು ಹತ್ತಿಕ್ಕದೇ ಇದ್ದಿದ್ದರೆ ಈ ಸಂಕಷ್ಟ ಎದುರಾಗುತ್ತಿರಲಿಲ್ಲ’ ಎಂದು ಹೇಳಿದರು.

ಭಾರತದ ರೈತರ ಹೋರಾಟದಲ್ಲಿ ವಿದೇಶಿ ಕೈವಾಡಿ ಇತ್ತು. ಬಾಂಗ್ಲಾದ ವಿದ್ಯಾರ್ಥಿಗಳ ಹೋರಾಟದಲ್ಲಿ ಅಂಥದ್ದು ಇತ್ತೇ ಎಂಬುದರ ಬಗ್ಗೆ ಹೇಳಲಾಗದು
ರಾಮ್‌ ಮಾಧವ್ ಕಾರ್ಯಕಾರಿಣಿ ಸದಸ್ಯ ಆರ್‌ಎಸ್‌ಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.