ADVERTISEMENT

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ದೇಶದ್ರೋಹದ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:46 IST
Last Updated 26 ಏಪ್ರಿಲ್ 2019, 19:46 IST
   

ಬೆಂಗಳೂರು: ‘ಪುಲ್ವಾಮಾ ಉಗ್ರರ ದಾಳಿ ಬಗ್ಗೆ ಮೊದಲೇ ಮಾಹಿತಿ ಇದ್ದರೂ, ಆ ವಿಷಯವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಪರಿಶಿಷ್ಟ ವರ್ಗ (ಎಸ್ಸಿ) ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ವಿಧಾನಸೌಧ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.

‘ಫೆ.14ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ವಿಧ್ವಂಸಕ ಕೃತ್ಯದಲ್ಲಿ 45 ಯೋಧರು ಬಲಿಯಾದರು. ಏ.5ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ, ‘ಈ ದಾಳಿ ನಡೆಯುತ್ತದೆ ಎಂದು ನನಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು. ನಿವೃತ್ತ ಸೇನಾ ಅಧಿಕಾರಿಯೊಬ್ಬರು ನನಗೆ ಆ ವಿಷಯ ತಿಳಿಸಿದ್ದರು’ ಎಂದು ಖುದ್ದು ಹೇಳಿಕೊಂಡಿದ್ದರು. ಇಷ್ಟೆಲ್ಲ ಗೊತ್ತಿದ್ದರೂ ಸುಮ್ಮನೆ ಕೂರುವ ಮೂಲಕ 45 ಯೋಧರ ಸಾವಿಗೆ ಪರೋಕ್ಷವಾಗಿ ಕಾರಣೀಕರ್ತರಾಗಿದ್ದಾರೆ’ ಎಂದು ರಾಮು ದೂರಿನಲ್ಲಿ ವಿವರಿಸಿದ್ದಾರೆ.

‘ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ, ದೇಶದ ಅಖಂಡತೆ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದಾಗಿ ಹೇಳಿದ್ದರು. ದೇಶದ ಬಗ್ಗೆ ಅವರಿಗೆ ಇರುವ ಕಾಳಜಿ ಇದೇನಾ? ಕುಮಾರಸ್ವಾಮಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಅಪರಾಧ ಸಂಚನ್ನು ಮುಚ್ಚಿಟ್ಟ (ಐಪಿಸಿ 123) ಹಾಗೂ ದೇಶದ್ರೋಹದ (121ಎ) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.