ADVERTISEMENT

ಸ್ವ ಉದ್ಯೋಗ: 5 ಲಕ್ಷ ಜನರಿಗೆ ತರಬೇತಿ

ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕದ ಸಂಕಲ್ಪ l ಸಿ.ಎಂ ಘೋಷಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 23:31 IST
Last Updated 28 ಜುಲೈ 2022, 23:31 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದಲ್ಲಿ 28 ಸಾವಿರ ಗ್ರಾಮಗಳಲ್ಲಿಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಯೋಜನೆಯಡಿ ಪ್ರತಿ ಗ್ರಾಮದಲ್ಲಿ ತಲಾ ಒಂದು ವಿವೇಕಾನಂದ ಸ್ವಸಹಾಯ ಸಂಘ ರಚಿಸಿ, ಯುವಕರಿಗೆ ಆರ್ಥಿಕ ನೆರವು, ಬ್ಯಾಂಕ್‌ ವ್ಯವಸ್ಥೆ,ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು ಎಂದರು.

‘ಸ್ತ್ರೀ ಸಾಮರ್ಥ್ಯ’ ಯೋಜನೆಯಡಿ, ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡಲಾಗುವುದು. ಇದಕ್ಕಾಗಿ ₹1.50 ಲಕ್ಷ ನೀಡುವ ಜೊತೆಗೆ ಸುಲಭವಾಗಿ ಸಾಲಸೌಲಭ್ಯ ಒದಗಿಸಲು ಆಧಾರ್‌ ಸಂಖ್ಯೆ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡಲಾಗುವುದು. 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ಎಂಡ್‌ ಟು ಎಂಡ್‌ ನೆರವು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ADVERTISEMENT

ಪುಣ್ಯಕೋಟಿ ದತ್ತು ಯೋಜನೆಯಡಿ ಗೋ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆ ಉತ್ತೇಜಿಸಲಾಗುವುದು. ಒಬ್ಬ ವ್ಯಕ್ತಿ ವರ್ಷಕ್ಕೆ ₹11,000 ಪಾವತಿಸಿ ಒಂದು ಗೋವಿನ ನಿರ್ವಹಣೆ ಮಾಡಬಹುದು. ವೈಯಕ್ತಿಕವಾಗಿ ದತ್ತು ಪಡೆಯಬಹುದು. ಇಲ್ಲವೇ ಸರ್ಕಾರಕ್ಕೆ ₹11,000 ಪಾವತಿಸಿ ದತ್ತು ಪಡೆಯಬಹುದಾಗಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ವರ್ಗದವರ ಅಭಿವೃದ್ಧಿಗೆ ಸಮಗ್ರ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಿ, ಅದರ ಲಾಭವನ್ನು ಎಲ್ಲರಿಗೂ ತಲುಪಿಸಲು ಸರ್ವರ ವಿಕಾಸವಾಗುವ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದುರು.

ನಾಲ್ಕು ತಿಂಗಳಲ್ಲಿ ಬಜೆಟ್ ಅನುಷ್ಠಾನ: ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಒಂದೇ ತಿಂಗಳಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಿ, 4 ತಿಂಗಳ ಅವಧಿಯಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯುವಜನರಿಗೆ ಉದ್ಯೋಗ ನೀಡುವುದರಿಂದ ಹಿಡಿದು ರೈತನವರೆಗೆ, ಕೂಲಿಕಾರರಿಗೆ, ಮಹಿಳೆಯರಿಗೆ, ಎಸ್‌ಸಿಎಸ್‌ಟಿ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೆ ಮುನ್ನ ಹಿರಿಯ ಅಧಿಕಾರಿ ಸಭೆ ನಡೆಸಿದ ಬೊಮ್ಮಾಯಿ, ಕಡತ ವಿಲೇವಾರಿ ಮಾಡುವುದಷ್ಟೇ ತಮ್ಮ ಜವಾಬ್ದಾರಿ ಎಂದು ಭಾವಿಸದೆ, ಸರ್ಕಾರ ಕೈಗೊಂಡ ಜನಪರ ನಿರ್ಣಯಗಳು ಜನರಿಗೆ ತಲುಪಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ನಡೆದು ಬಂದ ಹಾದಿಯನ್ನು ಅವಲೋಕನ ಮಾಡಿಕೊಳ್ಳಬೇಕು ಹಾಗೂ ಮುಂದಿನ ಹೆಜ್ಜೆಯನ್ನು ಗುರು ತಿಸಬೇಕು. ಕರ್ನಾಟಕದಲ್ಲಿ ಉತ್ತಮ ಆಡಳಿತ ಪರಂಪರೆ ಇದೆ. ನಾವು ಸಮಾಜಕ್ಕೆ ಏನನ್ನು ಕೊಡುತ್ತೇವೆ ಎನ್ನುವುದು ಮುಖ್ಯ. ರಾಜಕಾರಣಿಗಳ ಅಧಿಕಾರವಧಿ ಐದು ವರ್ಷ. ಆದರೆ ಅಧಿಕಾರಿಗಳು ಶಾಶ್ವತವಾಗಿ ಇರುವವರು. ನಿಮ್ಮ ಸಾಮರ್ಥ್ಯ, ಅನುಭವಗಳನ್ನು ಅಭಿವೃದ್ಧಿಗೆ ಉಪಯೋಗವಾಗುವಂತೆ ಬಳಸಿಕೊಳ್ಳಿ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕರಾವಳಿ ಜಿಲ್ಲೆಯ ಸಚಿವರುಗಳನ್ನು ಬಿಟ್ಟು ಉಳಿದ ಬಹುತೇಕ ಸಚಿವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.