ADVERTISEMENT

ಅನಾಥ ಶವ ಸಾಗಿಸುವ ಆಯೂಬ್‌ಗೆ ಗೌರವ: ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

ಕೆ.ಓಂಕಾರ ಮೂರ್ತಿ
Published 10 ಅಕ್ಟೋಬರ್ 2020, 19:30 IST
Last Updated 10 ಅಕ್ಟೋಬರ್ 2020, 19:30 IST
ತಮ್ಮ ವಾಹನದೊಂದಿಗೆ ಆಯೂಬ್‌ ಅಹ್ಮದ್‌
ತಮ್ಮ ವಾಹನದೊಂದಿಗೆ ಆಯೂಬ್‌ ಅಹ್ಮದ್‌   

ಮೈಸೂರು: ಇಪ್ಪತ್ತೊಂದು ವರ್ಷಗಳಿಂದ ಸುಮಾರು 10 ಸಾವಿರ ಅನಾಥ ಶವಗಳನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಿರುವ ಮೈಸೂರಿನ ಆಯೂಬ್‌ ಅಹ್ಮದ್‌ ಅವರನ್ನು, ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಲಾಗುತ್ತಿದೆ.

40 ವರ್ಷ ವಯಸ್ಸಿನ ಆಯೂಬ್, ಈಚೆಗೆ ಕೋವಿಡ್‌ನಿಂದ ಮೃತಪಟ್ಟವರ 100ಕ್ಕೂ ಹೆಚ್ಚು ದೇಹಗಳನ್ನು ತಮ್ಮ ಸ್ವಂತ ವಾಹನದಲ್ಲಿ ಸಾಗಿಸಿ ಶವಸಂಸ್ಕಾರದಲ್ಲಿ ಜಿಲ್ಲಾಡಳಿತಕ್ಕೆನೆರವಾಗಿದ್ದಾರೆ.

‘ಕೋವಿಡ್‌ನಿಂದ ಮೃತಪಟ್ಟ ತಮ್ಮ ಹೆತ್ತವರನ್ನು ನೋಡಲು, ಶವಸಂಸ್ಕಾರ ನಡೆಯುವ ಸ್ಥಳಕ್ಕೆ ಬರಲು ಸ್ವತಃ ಮಕ್ಕಳೇ ಹಿಂದೇಟು ಹಾಕಿದ್ದನ್ನು ಕಣ್ಣಾರೆ ಕಂಡೆ. ಇದು ಮನಸ್ಸಿಗೆ ತುಂಬಾನೋವು ಉಂಟು ಮಾಡಿತು. ಹೀಗಾಗಿ, ಇಂಥ ಪ್ರಕರಣಗಳಲ್ಲಿ ಮುಂದೆ ನಿಂತು ಕೆಲಸ ಮಾಡಿದೆ. ಹಿಂದೂ, ಕ್ರಿಶ್ಚಿಯನ್ನರು, ಮುಸ್ಲಿಮರು ಎನ್ನದೇ ಶವಸಂಸ್ಕಾರದಲ್ಲಿ ಭಾಗಿಯಾದೆ’ ಎಂದು ಆಯೂಬ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವಸ್ಮಶಾನದಬದಿಯಲ್ಲಿ ಈಚೆಗೆ ಅಂಗವಿಕಲನೊಬ್ಬನ ಶವ ಎಸೆದು ಹೋಗಿದ್ದರು. ಕೋವಿಡ್‌ ಕಾರಣ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದರು. ಇಂಥ ಸಂದರ್ಭದಲ್ಲಿ ಸ್ಥಳೀಯರು ಕರೆ ಮಾಡಿದಾಗ, ಅಂತ್ಯಸಂಸ್ಕಾರ ನೆರವೇರಿಸಿದ್ದು ಆಯೂಬ್‌.ಕೆರೆ, ಕಟ್ಟೆ, ಕಾಲುವೆಗಳಲ್ಲಿ ಬಿದ್ದು ಮೃತರಾದವರ ದೇಹವನ್ನೂ ಮೇಲೆತ್ತಿ ಸಾಗಿಸುತ್ತಾರೆ.

‘ಇವತ್ತು ನನಗೆ ಗೌರವ, ಸನ್ಮಾನ, ಮೆಚ್ಚುಗೆ ಸಿಗುತ್ತಿರಬಹುದು. ಆದರೆ, ಅವೆಲ್ಲಾ ತಾತ್ಕಾಲಿಕ. ಕೊನೆಗೆ ಎಲ್ಲಾ ಬಿಟ್ಟು ಹೋಗಬೇಕಾಗುತ್ತದೆ. ಉಳಿಯುವುದು ನಾನು ಮಾಡಿದ ಒಳ್ಳೆಯ ಕೆಲಸ, ಮನುಷ್ಯತ್ವ’ ಎಂದು ಹೇಳುತ್ತಾ ಭಾವುಕರಾದರು.

ಇದಷ್ಟೇ ಅಲ್ಲ; ನಗರ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಬಳಿಪಾದಚಾರಿ ಮಾರ್ಗದಲ್ಲಿ ಭಿಕ್ಷೆಬೇಡುವವರಿಗೆ ನಿತ್ಯ ಆಹಾರ ಕೂಡ ಒದಗಿಸುತ್ತಿದ್ದಾರೆ ಅವರು.

‘ಮೈಸೂರಿನಿಂದ ಗುಂಡ್ಲುಪೇಟೆಗೆ ಹೋಗುವಾಗ ದಾರಿಯಲ್ಲಿ ಒಂದು ಶವ ಬಿದ್ದಿತ್ತು. ಎಂಟು ಗಂಟೆ ಅಲ್ಲೇ ಬಿದ್ದಿದ್ದರೂ ತೆಗೆದಿರಲಿಲ್ಲ. ನಾನೇ ಆ ಅನಾಥ ಹೆಣವನ್ನು ಅಂಬಾಸಿಡರ್‌ ಕಾರಿನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ಮಾಡಿದೆ. ಆಗ ನನಗೆ 19 ವರ್ಷ. ಆಗ, ಹೆಣ ಎತ್ತುವವನು ಎಂದು ಹೀಯಾಳಿಸಿದ್ದರು. ಈಗ ಅವರೇ ನನ್ನ ಕಾರ್ಯಕ್ಕೆಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.