ADVERTISEMENT

ಸಿಡಿ ಕೇಸ್‌ ವಿಚಾರಣೆ: ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ನೋಟಿಸ್‌

ಸಿಡಿ ಜಾರಕಿಹೊಳಿ ಪ್ರಕರಣದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 16:52 IST
Last Updated 30 ನವೆಂಬರ್ 2021, 16:52 IST
 ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಮಾಜಿ ಸಚಿವ ರಮೇಶಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸುತ್ತಿದ್ದ ವಿಚಾರಣೆ ವೇಳೆಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡ ‘ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ’ ಎಂಬುವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು.ಈ ವೇಳೆ ‘ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ’ ಎಂಬ ಹೆಸರಿನಲ್ಲಿ ವರ್ಚುವಲ್ ಮೂಲಕ ವಿಚಾರಣೆಗೆ ಲಾಗಿನ್‌ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನ ಸ್ಥಿತಿಯಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಇದನ್ನು ಸಿಡಿ ಪ್ರಕರಣದ ಸಂತ್ರಸ್ತೆಯ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ನ್ಯಾಯಪೀಠದ ಗಮನಕ್ಕೆ ತಂದರು.

‘ಪರದೆಯ ಮೇಲೆಅರೆನಗ್ನ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ವರ್ಚುವಲ್ ವಿಚಾರಣೆಗೆ ಲಾಗಿನ್ ಆಗಿರುವ ವ್ಯಕ್ತಿಯೊಬ್ಬ ಸ್ನಾನ ಮಾಡಿಕೊಂಡು ಬಂದು ಟವೆಲ್‌ನಲ್ಲಿ ಮೈ ಒರೆಸಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯ ಮೂಡಿ ಬರುತ್ತಿದೆ. ಇದರಿಂದ ಮಹಿಳಾ ವಕೀಲೆಯಾದ ನನಗೆ ಸಾಕಷ್ಟು ಮುಜುಗರ ಉಂಟಾಯಿತು. ಸರಿಯಾಗಿ ವಾದ ಮಂಡಿಸಲು ಸಮಸ್ಯೆಯಾಯಿತು. ಇದು ನ್ಯಾಯಾಂಗ ನಿಂದನೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ವ್ಯಕ್ತಿಯು ಅರೆನಗ್ನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದನ್ನು ನಾವು ನೋಡಿಲ್ಲ. ಆದರೂ, ಆ ವ್ಯಕ್ತಿಗೆ ನೋಟಿಸ್ ಜಾರಿಗೆ ಆದೇಶಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.