ADVERTISEMENT

ಸದಾಶಿವ ವರದಿ ತಕ್ಷಣ ಕೇಂದ್ರಕ್ಕೆ ಕಳುಹಿಸಲು ಮಾದಿಗ ಸಮುದಾಯದ ಪ್ರಮುಖರ ಆಗ್ರಹ

ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಮಾದಿಗ ಪ್ರಮುಖರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 18:32 IST
Last Updated 10 ಸೆಪ್ಟೆಂಬರ್ 2020, 18:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ತಕ್ಷಣ ಕೇಂದ್ರಕ್ಕೆ ಕಳಿಸಿಕೊಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಮಾದಿಗ ಸಮುದಾಯದ ಪ್ರಮುಖರ ಸಭೆ ತೀರ್ಮಾನಿಸಿದೆ.

ಮಾಜಿ ಸಚಿವ ಎಚ್. ಆಂಜನೇಯ ಮತ್ತು ಬಿಜೆಪಿ ಸಂಸದ ಎ. ನಾರಾಯಣ ಸ್ವಾಮಿ ನೇತೃತ್ವದಲ್ಲಿ ಇಲ್ಲಿನ ಶಾಸಕರ ಭವನದಲ್ಲಿ ಸಮುದಾಯದ ಪ್ರಮುಖರ ಸಭೆ ಗುರುವಾರ ನಡೆಯಿತು.

ಬಳಿಕ ಮಾತನಾಡಿದ ಎಚ್‌. ಆಂಜನೇಯ, ‘ಬಲಗೈ ಸಮುದಾಯದ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ವಿ. ಶ್ರೀನಿವಾಸ ಪ್ರಸಾದ್ ಮತ್ತು ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಿ, ಹೋರಾಟಕ್ಕೆ ಬೆಂಬಲಿಸುವಂತೆ ಮತ್ತು ಆಯೋಗದ ವರದಿ ಜಾರಿಗೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಲಾಗುವುದು’ ಎಂದರು.

ADVERTISEMENT

‘ದಲಿತ ಸಂಘಟನೆಗಳು ಮತ್ತು ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಲ್ಲ ನಾಯಕರು ಬೆಂಬಲ ಸೂಚಿಸುವಂತೆ ಮನವಿ ಮಾಡಲು ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮುದಾಯದ ಎಲ್ಲ ಮಠಾಧೀಶರನ್ನು ನಿಯೋಗದಲ್ಲಿ ಕರೆದೊಯ್ಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಸಂವಿಧಾನದ ಪರಿಚ್ಛೇದ 341ನ್ನು ತಿದ್ದುಪಡಿ ಮಾಡುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು’ ಎಂದು ಒತ್ತಾಯಿಸಿದ ಆಂಜನೇಯ, ‘ಅನ್ಯಾಯಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಒಳಮೀಸಲು ಕೊಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ ಅಭಿಪ್ರಾಯಪಟ್ಟಿದೆ’ ಎಂದರು.

ಎ. ನಾರಾಯಣ ಸ್ವಾಮಿ ಮಾತನಾಡಿ, ‘ನಮ್ಮ ಪಾಲು ಪಡೆಯಲು ಒಗ್ಗಟ್ಟಿನಿಂದ ಹೋರಾಡಬೇಕು’ ಎಂದು ಸಮುದಾಯದವರಿಗೆ ಮನವಿ ಮಾಡಿದರು.

ಕಾರಜೋಳ ಮೇಲೆ ಒತ್ತಡ

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ಕಾಲಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಜೆಪಿಯ ಮಾದಿಗ ಸಮುದಾಯಕ್ಕೆ ಶಾಸಕರು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರನ್ನು ಒತ್ತಾಯಿಸಿದ್ದಾರೆ.

ರಾಷ್ಟ್ರೋತ್ಥಾನ ಪರಿಷತ್‌ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಬಿಜೆಪಿ ಶಾಸಕರು, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಸಂಘ ಪರಿವಾರದ ಕೆಲವು ಪ್ರಮುಖರು ಭಾಗವಹಿಸಿದ್ದರು.

ರಾಜ್ಯದ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷ ಪರಿಶಿಷ್ಟ ಜಾತಿಯವರು ಇದ್ದು, ಈ ಪೈಕಿ ಸುಮಾರು 46 ಲಕ್ಷ ಮಾದಿಗ ಸಮುದಾಯದವರೇ ಇದ್ದಾರೆ. ಕಳೆದ ಚುನಾವಣೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡಲಿ ಎಂಬ ಕಾರಣಕ್ಕೆ ಮಾದಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ಈಗ ಮೀನಮೇಷ ಏಣಿಸುತ್ತಿರುವುದು ಏಕೆ? ಬಲಗೈ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿ ಮಾಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ, ‘ಸರ್ಕಾರದ ಒಬ್ಬ ಸಚಿವನಾಗಿ ಒಂದು ವರ್ಗದ ಪರವಾಗಿ ಮಾತನಾಡುವುದು ಸರಿಯಲ್ಲ. ನಾನು ಹೇಳಬೇಕಾಗಿರುವುದನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇನೆ. ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ಒಳ ಮೀಸಲಾತಿ ಜಾರಿಗೆ ಬದ್ಧನಾಗಿದ್ದೇನೆ. ನಿಮ್ಮ ಭಾವನೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.ಸಭೆಯಲ್ಲಿ ಆರೆಸ್ಸೆಸ್‌ ಪ್ರಮುಖ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.