ADVERTISEMENT

ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿಗೆ ಕರ್ನಾಟಕದ ಎಸ್‌ಇಪಿ ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 16:28 IST
Last Updated 8 ಆಗಸ್ಟ್ 2025, 16:28 IST
   

ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿದೆ. ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸುವ ಬಗ್ಗೆ ಆಯೋಗ ಪ್ರಸ್ತಾಪಿಸಿಲ್ಲ.

ರಾಷ್ಟ್ರೀಯ ಹೊಸ ಶಿಕ್ಷಣ ನೀತಿ–2020ರ (ಎನ್‌ಇಪಿ) ಬದಲಿಗೆ ರಾಜ್ಯಕ್ಕೆ ಪ್ರತ್ಯೇಕವಾದ ಶಿಕ್ಷಣ ನೀತಿ ರೂಪಿಸಲು ಪ್ರೊ.ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಸರ್ಕಾರ ರಚಿಸಿತ್ತು. 2,197 ಪುಟಗಳಿರುವ ಮೂರು ಸಂಪುಟ ಒಳಗೊಂಡ ತನ್ನ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗವು ಶುಕ್ರವಾರ ಸಲ್ಲಿಸಿತು. ಮೂರು ಸಂಪುಟಗಳನ್ನು ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಎಂದು ವರ್ಗೀಕರಿಸಲಾಗಿದೆ.

ಕನ್ನಡ ಸೇರಿದಂತೆ ಇತರೆ ಮಾತೃ ಭಾಷೆಗಳನ್ನು ಪ್ರಥಮ ಭಾಷೆಯಾಗಿ, ಇಂಗ್ಲಿಷ್‌ ಅನ್ನು ದ್ವಿತೀಯ ಭಾಷೆಯಾಗಿ ನಿಗದಿ ಮಾಡಬೇಕು. ಈ ನಿಯಮವನ್ನು ಸರ್ಕಾರಿ, ಅನುದಾನಿತ ಹಾಗೂ ಎಲ್ಲ ಖಾಸಗಿ ಶಾಲೆಗಳಲ್ಲೂ ಅನುಷ್ಠಾನಗೊಳಿಸಬೇಕು. ಐದನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದಲ್ಲೇ ಬೋಧನೆಗೆ ಅವಕಾಶ ನೀಡಬೇಕು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.