ADVERTISEMENT

ಎಸ್ಕಾಂ: ಹೊರಗುತ್ತಿಗೆ ನೌಕರರಿಗೆ ಪ್ರತ್ಯೇಕ ನಿಯಮ?

ವಿವಿಧ ಎಸ್ಕಾಂಗಳ 3 ಸಾವಿರಕ್ಕೂ ಹೆಚ್ಚು ‘ಜಿವಿಪಿ’ಗಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 0:02 IST
Last Updated 30 ಏಪ್ರಿಲ್ 2025, 0:02 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಇಂಧನ ಇಲಾಖೆಯ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಮೂರು ಸಾವಿರಕ್ಕೂ ಹೆಚ್ಚು ಗ್ರಾಮ ವಿದ್ಯುತ್‌ ಪ್ರತಿನಿಧಿಗಳು (ಜಿವಿಪಿ) ಸೇರಿದಂತೆ ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರತ್ಯೇಕ ನಿಯಮ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

‘ನಿಯಮದ ಪ್ರಕಾರ ಹೊರಗುತ್ತಿಗೆ ಕೆಲಸಗಾರರಿಗೆ ನೇರವಾಗಿ ವೇತನ ಪಾವತಿ ವ್ಯವಸ್ಥೆ ಸರಿಯಲ್ಲ. ಆದರೆ, ಹೊರಗುತ್ತಿಗೆ ಕೆಲಸಗಾರರು ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಪ್ರಾಣಾಪಾಯದ ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರಣ, ಈ ಕೆಲಸಗಾರರಿಗೆ ಸೇವಾ ಭದ್ರತೆ ಒದಗಿಸಲು ಪ್ರತ್ಯೇಕ ನಿಯಮ ರೂಪಿಸಬಹುದು’ ಎಂದು ಇಂಧನ ಇಲಾಖೆಗೆ ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ.

ADVERTISEMENT

ಜಿವಿಪಿಗಳ ಸೇವೆ ಸಕ್ರಮ ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇಂಧನ ಸಚಿವ ಕೆ.‌ಜೆ. ಜಾರ್ಜ್‌ ಅವರು ಸೂಚನೆ ನೀಡಿದ್ದರು. 

2004–05ನೇ ಸಾಲಿನ ಬಜೆಟ್‌ ಘೋಷಣೆಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಿವಿಪಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಸ್ಕಾಂಗಳ ವ್ಯಾಪ್ತಿಯಲ್ಲಿ ಮಾಪಕ ಓದುವ, ಡಿಮ್ಯಾಂಡ್‌ ಸಂಗ್ರಹಣೆ, ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡು ನೇಮಿಸಿ, ಬಳಿಕ ಪ್ರತಿವರ್ಷ ಆ ಒಪ್ಪಂದವನ್ನು ನವೀಕರಿಸಲಾಗುತ್ತದೆ. 

ಜಿವಿಪಿಗಳ ಬೇಡಿಕೆಗಳನ್ನು ಪರಿಶೀಲಿಸಲು ಬೆಸ್ಕಾಂನ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ 13 ಮಂದಿಯ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನೀಡಿದ ವರದಿಯಂತೆ ಎಲ್ಲ ಎಸ್ಕಾಂಗಳಲ್ಲಿ ಕರ್ತವ್ಯ ನಿರ್ವಹಿಸುವ ಜಿವಿಪಿಗಳ ಸಂಭಾವನೆಯನ್ನು ಏಕರೂಪವಾಗಿ ₹17,320 ಎಂದು ನಿಗದಿಪಡಿಸಲಾಗಿದೆ. ಜೊತೆಗೆ ವಿದ್ಯುತ್‌ ಅವಘಡಕ್ಕೆ ಒಳಗಾದರೆ ವೈದ್ಯಕೀಯ ವೆಚ್ಚವಾಗಿ ₹5 ಸಾವಿರ, ನಿಧನರಾದರೆ ₹2 ಲಕ್ಷ ಪರಿಹಾರ ನೀಡಲಾಗುತ್ತದೆ. ಜೊತೆಗೆ, ನಿಗದಿಪಡಿಸಿದ ಗುರಿ ಪೂರ್ಣಗೊಳಿಸಿದವರಿಗೆ ₹5 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

ತಮ್ಮನ್ನು ಕಾಯಂಗೊಳಿಸುವಂತೆ ಮತ್ತು ನಿರ್ವಹಿಸುವ ಹುದ್ದೆಗೆ ಸಮಾನಾಂತರ ಹುದ್ದೆಯ ಆರ್ಥಿಕ ಸೌಲಭ್ಯ ನೀಡುವಂತೆ ಜಿವಿಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸೇವೆ ಕಾಯಂ ಬದಲು ಸೇವಾ ಬದ್ಧತೆಗಾಗಿ ಒಂದು ಯೋಜನೆ ರೂಪಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯಲ್ಲಿ ಇದೇ ಜ. 24ರಂದು ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ, ಜಿವಿಪಿಗಳು ನಿಭಾಯಿಸುತ್ತಿರುವ ಕೆಲಸವನ್ನು ಪರಿಗಣಿಸಿ ಪ್ರತ್ಯೇಕ ಯೋಜನೆ ರೂಪಿಸಲು ನಾಲ್ಕು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿತ್ತು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಫೆ. 21ರಂದು ನಡೆದ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ, ‘ಕೆಇಆರ್‌ಸಿ ನಿರ್ದೇಶನದ ಅನ್ವಯ ಮುಂದಿನ ದಿನಗಳಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸಲಾಗುವುದು. ಹೀಗಾಗಿ ಜಿವಿಪಿಗಳ ಸೇವೆಯ ಅಗತ್ಯ ಇಲ್ಲ’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ, ಹೈಕೋರ್ಟ್‌ ಜ. 24ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತಂತೆ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.