
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ವಿಧಾನ ಸಭೆ ಕಲಾಪದಲ್ಲಿ ರಾಜು ಕಾಗೆ ಮಾತನಾಡಿದರು
ಸುವರ್ಣ ವಿಧಾನಸೌಧ (ಬೆಳಗಾವಿ): ‘ಯಾವುದೇ ಸಂಘ– ಸಂಸ್ಥೆಗಳು, ಸಂಘಟನೆಗಳು ಮತ್ತು ಯಾರು ಏನೇ ಹೇಳಲಿ, ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಹೋರಾಟ ಮಾಡುತ್ತೇನೆ’ ಎಂದು ಕಾಂಗ್ರೆಸ್‌ನ ರಾಜು ಕಾಗೆ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರತ್ಯೇಕ ರಾಜ್ಯ ಮಾಡಬೇಕು ಎಂಬುದರ ಕುರಿತಾಗಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.
‘ನೀರಾವರಿ, ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಭಾಗವನ್ನು ನಿರ್ಲಕ್ಷಿಸಲಾಗಿದೆ. ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಲ್ಯಾಣ ಕರ್ನಾಟಕದಂತೆ ಕಿತ್ತೂರು ಕರ್ನಾಟಕ ಭಾಗಕ್ಕೂ ₹5,000 ಕೋಟಿ ನೀಡುವುದಾಗಿ ಪ್ರಕಟಿಸಲಾಗಿತ್ತು. ಈವರೆಗೂ ಹಣ ಬಂದಿಲ್ಲ. ಪ್ರತಿಯೊಂದಕ್ಕೂ ನಾವು ಬೆಂಗಳೂರಿಗೆ ಹೋಗುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.
‘ಪ್ರಜಾಸೌಧ ನಿರ್ಮಾಣಕ್ಕೆ ಕಡೂರಿಗೆ ₹16 ಕೋಟಿ ಕೊಡುತ್ತಾರೆ. ನನ್ನ ಕ್ಷೇತ್ರಕ್ಕೂ ಅಷ್ಟೇ ಮೊತ್ತ ಕೊಡಿ. ನಮ್ಮ ಕ್ಷೇತ್ರದಲ್ಲಿ ನದಿಗೆ ಸೇತುವೆ ನಿರ್ಮಿಸಲು ನಾಲ್ಕು ಪಿಲ್ಲರ್ ಹಾಕಲಾಗಿದೆ. ಆದರೆ ಸೇತುವೆ ನಿರ್ಮಾಣ ಆಗಿಲ್ಲ. ಯಾವುದೇ ಕೆಲಸ ಆಗಬೇಕು ಎಂದರೆ ಮುಖ್ಯಮಂತ್ರಿ ಬಳಿ ಹೋಗಿ ಎಂದು ಹೇಳುತ್ತಾರೆ. ನಾನು ಏನೇ ಮಾತನಾಡಿದರೂ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದು ಬಿಂಬಿಸ ಲಾಗುತ್ತದೆ ನಮ್ಮ ಗೋಳು ಕೇಳುವವರು ಯಾರು’ ಎಂದು ಕಾಗೆ ಪ್ರಶ್ನಿಸಿದರು.
‘ನಮ್ಮ ಭಾಗದ ಜಿಲ್ಲೆಗಳಲ್ಲಿ ಅತಿಯಾದ ನೀರಾವರಿಯಿಂದಾಗಿ ಶೇ 60 ರಿಂದ ಶೇ 70 ರಷ್ಟು ಕೃಷಿ ಭೂಮಿ ಕ್ಷಾರಯುಕ್ತವಾಗಿದೆ. ಇದನ್ನು ಸರಿಪಡಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಠ ₹10 ಕೋಟಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
‘ಬೆಳಗಾವಿಯಲ್ಲಿ ವಿಧಾನಮಂಡಲದ 13 ಅಧಿವೇಶನಗಳು ನಡೆದಿದ್ದು, ಇಲ್ಲಿ ಕೇವಲ ಚರ್ಚೆ ನಡೆದಿದೆಯೇ ಹೊರತು ಉತ್ತರ ಕರ್ನಾಟಕ ಭಾಗ್ಯದ ಬಾಗಿಲು ತೆರೆಯಬಹುದು ಎಂಬ ನಮ್ಮ ಕನಸು ಕನಸಾಗಿಯೇ ಉಳಿದಿದೆ’ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಮ್ಮ ಭಾಗದಲ್ಲಿ ನೀರು, ನೀರಾವರಿ, ಶಿಕ್ಷಣ ಸೇರಿ ಕಾನೂನು ಸುವ್ಯವಸ್ಥೆ ನಿರೀಕ್ಷೆ ಹುಸಿಯಾಗಿದೆ’ ಎಂದರು.
‘ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಇನ್ನೂ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೃಷ್ಣಾ ನೀರಾವರಿ ಯೋಜನೆಗೆ ₹1.50 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಎರಡೂವರೆ ವರ್ಷಗಳಲ್ಲಿ ಕೇವಲ ₹36 ಸಾವಿರ ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ 2,004 ಹಾಸಿಗೆಗಳಿದ್ದು, ಇದಕ್ಕೆ ₹24 ಕೋಟಿ ಅನುದಾನ, 2,100 ಹಾಸಿಗೆ ಇರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ₹76 ಕೋಟಿ ಅನುದಾನ ನೀಡಲಾಗಿದೆ. ಇದು ತಾರತಮ್ಯ ಅಲ್ಲವೇ’ ಎಂದು ಪ್ರಶ್ನಿಸಿದರು.
‘ಉತ್ತರ ಕರ್ನಾಟಕದಲ್ಲಿ ₹5,000 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈವರೆಗೆ ಎಷ್ಟು ಹೂಡಿಕೆ ಮಾಡಲಾಗಿದೆ. ಸೆಮಿಕಂಡಕ್ಟರ್ ಉದ್ಯಮವನ್ನು ನಮ್ಮ ಭಾಗಕ್ಕೆ ನೀಡಬಹು ದಾಗಿತ್ತು. ಆದರೆ ಅದನ್ನು ಕೋಲಾರಕ್ಕೆ ನೀಡಲಾಗಿದೆ’ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 2008 ರಿಂದ ಈವರೆಗೆ ₹31 ಸಾವಿರ ಕೋಟಿ ನೀಡಲಾಗಿದೆ. ಈ ಅವಧಿಯಲ್ಲಿ ಮಂಡಿಸಿದ ಬಜೆಟ್ ಮೊತ್ತಕ್ಕೆ ಹೋಲಿಸಿದರೆ ನೀಡಿರುವ ಅನುದಾನ ಶೇ 1 ಕ್ಕಿಂತಲೂ ಕಡಿಮೆ’ ಎಂದರು.
‘ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮುಚ್ಚಿದೆ. ಈ ಗುರುಕುಲ ಮೈಸೂರಿನಲ್ಲಿ ಇದ್ದರೆ ಮುಚ್ಚುತ್ತಿದ್ದರೆ? ಇದು ತಾರತಮ್ಯ ಅಲ್ಲವೇ’ ಎಂದು ಬೆಲ್ಲದ ಪ್ರಶ್ನಿಸಿದರು.
‘ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರು ಕೂಡಲೇ ಮಾಲೀಕರ ಸಭೆಯನ್ನು ಕರೆಯಬೇಕು ಮತ್ತು ಪ್ರಧಾನಿಯವರ ಬಳಿ ನಿಯೋಗ ಒಯ್ಯಬೇಕು’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಉತ್ತರ ಕರ್ನಾಟಕದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಈವರೆಗೂ ಸಭೆ ಕರೆದಿಲ್ಲ’ ಎಂದು ಹೇಳಿದರು.
‘ಒಂದು ಟನ್ ಕಬ್ಬಿನಲ್ಲಿ ಸಕ್ಕರೆ ಕಾರ್ಖಾನೆಗಳು ₹14,500 ಉಳಿತಾಯ ಮಾಡುತ್ತವೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿ ದ್ದಾರೆ. ಒಂದು ವೇಳೆ ಅದು ನಿಜವಾಗಿದ್ದರೆ ಎಲ್ಲ ಮಾಲೀಕರು ಓಡಾಟಕ್ಕೆ ಹೆಲಿಕಾಪ್ಟರ್ ಗಳನ್ನು ಇಟ್ಟುಕೊಳ್ಳಬಹುದಾಗಿತ್ತು. ಸಕ್ಕರೆ ಕಾರ್ಖಾನೆಗಳಿಗೆ ಆ ರೀತಿ ಉಳಿತಾಯ ಮಾಡಿಕೊಡುವ ವ್ಯಕ್ತಿಗೆ ತಿಂಗಳಿಗೆ ₹1 ಕೋಟಿ ಸಂಬಳ ಕೊಟ್ಟು ಇಟ್ಟುಕೊಳ್ಳಲು ತಯಾರಿದ್ದೇವೆ’ ಎಂದೂ ಯತ್ನಾಳ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.