ADVERTISEMENT

ಮುರುಘಾ ಮಠದಲ್ಲಿ ಸರಣಿ ಅಪರಾಧಗಳು: ಅಡ್ವೊಕೇಟ್‌ ಜನರಲ್‌

ಶಿವಮೂರ್ತಿ ಶರಣರ ಅಧಿಕಾರ ನಿರ್ಬಂಧಿಸಿದ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 14:49 IST
Last Updated 2 ಮಾರ್ಚ್ 2023, 14:49 IST
ಚಿತ್ರದುರ್ಗದ ಮುರುಘಾ ಮಠ
ಚಿತ್ರದುರ್ಗದ ಮುರುಘಾ ಮಠ   

ಬೆಂಗಳೂರು: ಮಠದಲ್ಲಿ ಸರಣಿ ಅಪರಾಧಗಳು ನಡೆದ ಸರಮಾಲೆಯೇ ಇದೆ ಎಂಬುದು ತನಿಖಾಧಿಕಾರಿಗಳಿಗೆ ಮೇಲ್ನೋಟಕ್ಕೆ ಕಂಡುಬಂದ ಕಾರಣಕ್ಕಾಗಿ ದೋಷಾರೋಪ ಪಟ್ಟಿಯಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆಯನ್ನೂ ಅಡಕಗೊಳಿಸಲಾಗಿದೆ. ಹೀಗಾಗಿಯೇ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದೆ...

ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿದ ರಿಟ್‌ ಅರ್ಜಿಯ ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹೈಕೋರ್ಟ್‌ಗೆ ವಿವರಿಸಿದ್ದು ಹೀಗೆ.

ಈ ಸಂಬಂಧ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಎಚ್‌.ಎಂ.ವಿಶ್ವನಾಥ್‌ ಮತ್ತು ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ಈ ಮೊದಲು ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ಧಾರ್ಮಿಕ ಸಂಸ್ಥೆಗಳಲ್ಲಿ ಸರಣಿಯೋಪಾದಿಯಲ್ಲಿ ಅನೈತಿಕ ಚಟುವಟಿಕೆಗಳು ನಡೆದಿಲ್ಲ. ಒಂದು ಬಾರಿ ಮಾತ್ರವೇ ಘಟಿಸಿದೆ ಎನ್ನಲಾದ ಆರೋಪವನ್ನೇ ನೆಪವಾಗಿಟ್ಟುಕೊಂಡು, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯಿಸಿರುವುದು ತಪ್ಪು’ ಎಂದು ವಾದ ಮಂಡಿಸಿದ್ದರು.

ಆದರೆ, ಇದನ್ನು ಅಲ್ಲಗಳೆದ ಅಡ್ವೊಕೇಟ್‌ ಜನರಲ್‌ ನಾವದಗಿ ಅವರು, ‘ಈ ಪ್ರಕರಣದಲ್ಲಿ ಸರಣಿಯೋಪಾದಿಯಲ್ಲಿ ಅಪರಾಧಗಳು ನಡೆದಿವೆ ಎಂಬ ಕಾರಣಕ್ಕಾಗಿಯೇ ಈ ಕಾಯ್ದೆಯನ್ನೂ ತನಿಖಾಧಿಕಾರಿಗಳು ಅಡಕಗೊಳಿಸಿದ್ದಾರೆ’ ಎಂದರು.

‘ಈ ಕಾಯ್ದೆಯನ್ನು ಮಠಕ್ಕೆ ಮಾತ್ರವೇ ನಿರ್ಬಂಧ ಮಾಡಬಹುದು. ಆದರೆ, ವಿದ್ಯಾಪೀಠಕ್ಕಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಏಕೆಂದರೆ, ಮಠ, ವಿದ್ಯಾಪೀಠ ಮತ್ತು ಟ್ರಸ್ಟ್ ಮೂರೂ ಅವಿಭಾಜ್ಯ ಅಂಗಗಳು. ವಿದ್ಯಾಪೀಠದ ಬೈ–ಲಾ ಪ್ರಕಾರ, ಸಂಸ್ಥಾಪಕ ಅಧ್ಯಕ್ಷರು ಮತ್ತು ಅವರ ನಂತರ ಕಾಲಕಾಲಕ್ಕೆ ಬರುವ ಬೃಹನ್ಮಠದ ಜಗದ್ಗುರುಗಳೇ ಅಧ್ಯಕ್ಷರಾಗಬೇಕೆಂಬ ನಿಯಮ ಇದೆ. ಹಾಗಾಗಿ, ಪೀಠಾಧಿಪತಿಯನ್ನು ಕೇವಲ ಮಠದ ಜವಾಬ್ದಾರಿಯಿಂದ ಮಾತ್ರವೇ ದೂರವಿಡುವಂತೆ ನಿರ್ಬಂಧಕಾಜ್ಞೆ ನೀಡಿದರೆ ಅದು ಅನಾಹುತಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ’ ಎಂಬ ಆತಂಕ ವ್ಯಕ್ತಪಡಿಸಿದರು.

‘ವಿಚಾರಣೆಯನ್ನು ಬಾಕಿ ಇರಿಸಿ ಎಂಬ ಶಬ್ದದ ಅರ್ಥವನ್ನು ನಿಘಂಟುಗಳ ಆಧಾರದಲ್ಲಿ ಹೇಳುವುದಾದರೆ ವಿಚಾರಣೆ ಆರಂಭವಾದ ನಂತರ ಎಂದಾಗುವುದಿಲ್ಲ. ಏಕೆಂದರೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2)ರಡಿಯಲ್ಲಿ ಸಂಬಂಧಿಸಿದ ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ಮಾತ್ರ ಪರಿಶೀಲಿಸಿ ಮಧ್ಯಂತರ ನಿರ್ಬಂಧಕ ಆಜ್ಞೆಯನ್ನು ನೀಡಬಹುದಾಗಿದೆ. ಹಾಗಾಗಿ, ವಿಚಾರಣೆ ಆರಂಭವಾಗುವತನಕ ಕಾಯಬೇಕಿಲ್ಲ. ಇದು ಈ ಕಲಂನ ಉದ್ದೇಶ ಮತ್ತು ಸದಾಶಯವಾಗಿದೆ’ ಎಂದು ಪ್ರತಿಪಾದಿಸಿದರು.

ಅಡ್ವೊಕೇಟ್‌ ಜನರಲ್‌ ಅವರ ವಾದಕ್ಕೆ ಪ್ರತಿ ಉತ್ತರ ನೀಡುವುದಾಗಿ ತಿಳಿಸಿದ ನಾಗೇಶ್‌ ಅವರ ಮನವಿಯನ್ನು ಮನ್ನಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.