ಬೆಂಗಳೂರು: ವಿರೋಧ ಪಕ್ಷದ ಸದಸ್ಯರು ಮಾತನಾಡುವಾಗ ಕೆಲವು ಸಚಿವರು ಎದ್ದು ನಿಂತು ಅಡ್ಡಿಪಡಿಸಿ, ಗದ್ದಲ ಸೃಷ್ಟಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಬಿಜೆಪಿ ಸದಸ್ಯರು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದ್ದಾರೆ.
‘ಬೆಳಗಾವಿ ಅಧಿವೇಶನವೂ ಸೇರಿ ಕಳೆದ ವರ್ಷ ನಡೆದ ಅಧಿವೇಶನಗಳಲ್ಲಿ ಕೆಲವು ಸಚಿವರು ಉತ್ತರ ನೀಡುವುದಕ್ಕಿಂತ ವಿರೋಧ ಪಕ್ಷಗಳ ಸದಸ್ಯರ ಮಾತಿಗೆ ಅಡ್ಡಿಪಡಿಸುವುದಕ್ಕೆ ಸಮಯ ವ್ಯರ್ಥಮಾಡಿದ್ದರು. ಇದು ಒಳ್ಳೆಯ ಲಕ್ಷಣವಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ವಿ.ಸುನಿಲ್‌ಕುಮಾರ್ ಸಭಾಧ್ಯಕ್ಷರಿಗೆ ತಿಳಿಸಿದರು. ಈ ಬಗ್ಗೆ ಗಮನಹರಿಸುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದರು’ ಎಂದು ಮೂಲಗಳು ಹೇಳಿವೆ.
ಅಲ್ಲದೇ, ಕಲಾಪದ ವೇಳೆ ಮಹತ್ವ ಚರ್ಚೆ ನಡೆಯುತ್ತಿರುವಾದ ವಿರೋಧ ಪಕ್ಷಗಳ ಸದಸ್ಯರು ಮಾತನಾಡುವುದನ್ನು ಕ್ಯಾಮೆರಾದಲ್ಲಿ ತೋರಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ. ವಿಡಿಯೊ ನಿರ್ವಹಣೆ ಮಾಡುವವರನ್ನು ಬದಲಾಯಿಸಬೇಕು ಎಂದೂ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಖಾದರ್, ಈ ಬಾರಿ ವಾರ್ತಾ ಇಲಾಖೆಯವರಿಗೇ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ‘ಶಾಸಕರ ವೇತನ ಮತ್ತು ಭತ್ಯೆಗಳ ಏರಿಕೆ ಮಾಡುವುದಕ್ಕೆ ಒಂದು ಆಯೋಗ ರಚಿಸುವುದು ಸೂಕ್ತ. ನಮ್ಮ ವೇತನ ನಾವೇ ಏರಿಸಿಕೊಳ್ಳುವುದು ಸರಿಯಲ್ಲ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.