ADVERTISEMENT

71 ವಿದ್ಯಾರ್ಥಿಗಳಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 19:48 IST
Last Updated 5 ಡಿಸೆಂಬರ್ 2021, 19:48 IST
   

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 71 ವಿದ್ಯಾರ್ಥಿಗಳಲ್ಲಿ ಕೋವಿಡ್‌–19 ದೃಢಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಸೀಗೊಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 59 ವಿದ್ಯಾರ್ಥಿಗಳು ಮತ್ತು 10 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರಲ್ಲಿ ಪ್ರಾಂಶುಪಾಲರೂ ಸೇರಿದ್ದಾರೆ.

ಆನೇಕಲ್ ಸಮೀಪದ ದೊಮ್ಮಸಂದ್ರ ಬಳಿ ಇರುವ ದಿ ಇಂಟರ್‌ ನ್ಯಾಷನಲ್‌ ಬೆಂಗಳೂರು ವಸತಿ ಶಾಲೆಯ ಐವರು ಮತ್ತು ಸ್ಫೂರ್ತಿ ಕಾಲೇಜಿನ ಏಳು ವಿದ್ಯಾರ್ಥಿಗಳು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 29 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 165ಕ್ಕೇರಿದಂತಾಗಿದೆ.

ADVERTISEMENT

ಸೀಗೊಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ತಾತ್ಕಾಲಿಕ ಕ್ಲಿನಿಕ್‌ ತೆರೆಯಲಾಗಿದೆ. ವಿದ್ಯಾಲಯವನ್ನು ಸೀಲ್ ಡೌನ್ ಮಾಡಲಾಗಿದೆ. ತರಗತಿ, ಇತರ ಚಟುವಟಿಕೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ಎನ್‌. ಉಮೇಶ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್‌ ಪರಿಶೀಲನೆ ನಡೆಸಿದ್ದಾರೆ.

‘ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಸಹಿತ ಒಟ್ಟು 457 ಮಂದಿಯ ಗಂಟಲು, ಮೂಗಿನ ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಎಲ್ಲರ ಪರೀಕ್ಷಾ ವರದಿ ಕೈಸೇರಿದ್ದು, 69 ಮಂದಿಗೆ ಸೋಂಕು ಪತ್ತೆಯಾಗಿದೆ. ಶೇ 5ರಷ್ಟು ಮಾದರಿಗಳನ್ನು ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್‌ ಸೀಕ್ವೆನ್ಸ್ ಪರೀಕ್ಷೆ) ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಡಾ.ಎಸ್‌.ಎನ್‌.ಉಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.