ADVERTISEMENT

ಸಿ‌.ಡಿ.ಪ್ರಕರಣ: ಡಿಕೆಶಿ ಹೆಸರು ಪ್ರಸ್ತಾಪ, ವಿಡಿಯೊ ನನ್ನದಲ್ಲ ಎಂದ ಯುವತಿಯ ಆಡಿಯೊ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 15:52 IST
Last Updated 26 ಮಾರ್ಚ್ 2021, 15:52 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಸಂತ್ರಸ್ತ ಯುವತಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊವೊಂದು ವೈರಲ್‌ ಆಗಿದೆ.

ತನ್ನ ತಮ್ಮ ಮತ್ತು ತಾಯಿಯೊಂದಿಗೆ ಮಾತನಾಡಿರುವ ಯುವತಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

‘ನೀನು ನನ್ನನ್ನು ನಂಬು. ಯಾರು ನನ್ನನ್ನು ನಂಬುತ್ತಿಲ್ಲ. ಆ ವಿಡಿಯೊದಲ್ಲಿರುವುದು
ನಾನಲ್ಲ. ಮಾಜಿ ಸಚಿವ ರಮೇಶ ಜಾರಕಿಹೊಳಿ ಜೊತೆಗಿರುವ ವಿಡಿಯೊ ಪ್ರಸಾರವಾಗಿರುವ ಬಗ್ಗೆ ಯಾರೂ ಹೆದರುವ ಅಗತ್ಯ ಇಲ್ಲ. ನಾನು ಡಿ.ಕೆ.ಶಿವಕುಮಾರ್‌ ಅವರ ಮನೆ ಬಳಿ ಬಂದಿದ್ದೇನೆ. ಖುದ್ದು ಅವರ ಕಡೆಯವರೇ ಬಂದು ಮಾತನಾಡುತ್ತಾರೆ’ ಎಂದು ಯುವತಿ ಹೇಳಿಕೊಂಡಿದ್ದಾರೆ.

ರಾಜೀನಾಮೆಗೆ ಬಿಜೆಪಿ ಆಗ್ರಹ: ಸಿ.ಡಿ. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಪ್ರಸ್ತಾಪವಾಗಿದೆ. ಅನೈತಿಕ, ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ಮಹಾನಾಯಕನ ರಾಜೀನಾಮೆಯನ್ನು ರಾಷ್ಟ್ರೀಯ ಮಹಾನಾಯಕಿ (ಸೋನಿಯಾ ಗಾಂಧಿ) ತಕ್ಷಣವೇ ಪಡೆಯಬೇಕು ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

‘ಒಬ್ಬ ಹೆಣ್ಣನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಜನತೆಯ ಕ್ಷಮಾಪಣೆ ಕೇಳಬೇಕು’ ಎಂದು ಆಗ್ರಹಿಸಿದೆ. ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಆ ಪ್ರಕರಣದ ‘ಸಂತ್ರಸ್ಥೆ’ ನೇರವಾಗಿ ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ ಕಾಂಗ್ರೆಸ್‌ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ!? ಎಂದು ಪ್ರಶ್ನಿಸಿದೆ.

ADVERTISEMENT

‘ಸಿ.ಡಿ. ಪ್ರಕರಣ ಆರಂಭದಿಂದಲೂ ಮಹಾನಾಯಕನ ಸುತ್ತಲೂ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್‌ ಮೈಂಡ್‌ಗಳಿಗೂ ಇರುವ ಸಂಬಂಧವವನ್ನು ಕಾಂಗ್ರೆಸ್‌ ಬಹಿರಂಗಗೊಳಿಸಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ.

‘ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮೂಲಕ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿ.ಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕಿದೆ’ ಎಂದಿದೆ.

‘ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಆಡು ಮಾತನ್ನು ಕಾಂಗ್ರೆಸ್‌ ಪಕ್ಷದ ನಾಯಕರನ್ನು ನೋಡಿಯೇ ಮಾಡಿರಬೇಕು. ಅಧಿಕಾರಕ್ಕಾಗಿ ಯಾವ ನೀಚ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎಂದು ಮಹಾನಾಯಕ ತೋರಿಸಿಕೊಟ್ಟಿದ್ದಾರೆ. ಮಹಾನಾಯಕನಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಉಳಿದಿದ್ದರೆ ಇದ್ದರೆ ತಕ್ಷಣ ರಾಜೀನಾಮೆ ನೀಡಲಿ’ ಎಂದು ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.