ADVERTISEMENT

ಗುಲಬರ್ಗಾ ವಿ.ವಿ ಅಧೀಕ್ಷಕನಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಕಾಯಂ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳಾ ಗುತ್ತಿಗೆ ಸಿಬ್ಬಂದಿಯೊಬ್ಬರು ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.

‘2012ರಲ್ಲಿ ನಾನು ಗುತ್ತಿಗೆ ಕೆಲಸಗಾರಳಾಗಿ ಸೇರಿದ್ದೇನೆ. ಸದ್ಯ ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಂಥಾಲಯ ವಿಭಾಗದ ಅಧೀಕ್ಷಕ ಶರಣಪ್ಪ ಮಾಕುಂಡಿ ಅವರು, ತಮ್ಮೊಂದಿಗೆ ಸಲುಗೆಯಿಂದ ಇದ್ದರೆ ಕಾಯಂ ಕೆಲಸ ಕೊಡಿಸುವುದಾಗಿ ನಂಬಿಸಿದರು. ಅದರಂತೇ ಮೇಲಿಂದ ಮೇಲೆ ಫೋನ್‌ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಮಾರ್ಚ್‌ 22ರಂದು ಕರೆ ಮಾಡಿದ ಶರಣಪ್ಪ, ಶೀಘ್ರದಲ್ಲಿಯೇ ಕಾಯಂ ನೌಕರಿ ಹಾಗೂ ಒಂದು ಪ್ಲಾಟ್‌ ಕೊಡಿಸುತ್ತೇನೆ. ನಿನ್ನ ಒಂದು ಬೆತ್ತಲೆ ವಿಡಿಯೊ ಮೊಬೈಲ್‌ಗೆ ಕಳಿಸು ಎಂದು ಆಮಿಷವೊಡ್ಡಿದರು. ಮಾರ್ಚ್‌ 23ರಂದು ನಾನು ನನ್ನ ನಿವಾಸದಲ್ಲಿ ವಿಡಿಯೊ ಮಾಡಿ, 24ರಂದು ಆತನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದೇನೆ. ಆದರೆ, ಮರುದಿನವೇ ಶರಣಪ್ಪ ಅವರು ವಿಶ್ವವಿದ್ಯಾಲಯದ ವಾಟ್ಸ್‌ಆ್ಯಪ್‌ ಗ್ರೂಪ್‌ ಒಂದರಲ್ಲಿ ಈ ವಿಡಿಯೊ ಶೇರ್‌ ಮಾಡಿದ್ದಾರೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಶರಣಪ್ಪ ಅವರಿಗೆ ನೀವು ನನ್ನ ತಂದೆ ಸಮಾನರಿದ್ದೀರಿ ನಾನು ವಿಡಿಯೊ ಹಾಕುವುದಿಲ್ಲ ಎಂದು ಹೇಳಿದರೂ ಅವರು ಒತ್ತಾಯ ಮಾಡಿದರು. ವಿಡಿಯೊ ಹರಿಬಿಟ್ಟು ಪರಿಶಿಷ್ಟ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ನನ್ನ ಮರ್ಯಾದೆಗೆ ಧಕ್ಕೆ ತಂದಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದೂ ಮಹಿಳೆ ದೂರಿನಲ್ಲಿ ಕೋರಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 292, 417, 420, 354 (ಎ),ಐಟಿ ಕಾಯ್ದೆ 67 ಅಡಿ;ಮೋಸ, ವಂಚನೆ, ಖಾಸಗಿತನಕ್ಕೆ ಧಕ್ಕೆ ಹಾಗೂ ಪರಿಶಿಷ್ಟ ಮಹಿಳೆಗೆ ದೌರ್ಜನ್ಯ ಕಾಯ್ದೆಯಡಿ ಎಫ್‌ಐಆರ್‌ದಾಖಲಸಿಕೊಳ್ಳಲಾಗಿದೆ.ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.