ADVERTISEMENT

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಜಾಮೀನು ಕೋರಿ ಹೈಕೋರ್ಟ್‌ಗೆ ಶರಣರ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 12:56 IST
Last Updated 7 ಜೂನ್ 2023, 12:56 IST
ಮುರುಘಾ ಮಠದ ಶಿವಮೂರ್ತಿ ಶರಣ
ಮುರುಘಾ ಮಠದ ಶಿವಮೂರ್ತಿ ಶರಣ   

ಬೆಂಗಳೂರು: ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ನಿಯಮಿತ (ರೆಗ್ಯುಲರ್‌) ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಆರೋಪಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ನ್ಯಾಯಮೂರ್ತಿ ಪಿ. ಎಂ. ನವಾಜ್‌ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಸದ್ಯದಲ್ಲೇ ವಿಚಾರಣೆಗೆ ನಿಗದಿಯಾಗುವ ನಿರೀಕ್ಷೆ ಇದೆ.

ವಕಾಲತ್ತು ವಹಿಸಿರುವ ವಕೀಲ ಸಂದೀಪ್‌ ಎಸ್‌. ಪಾಟೀಲ್‌ ಅವರು ಬುಧವಾರ ಹೈಕೋರ್ಟ್‌ ದಸ್ತಾವೇಜು ವಿಭಾಗದಲ್ಲಿ ಕ್ರಿಮಿನಲ್‌ ಅರ್ಜಿ ದಾಖಲು ಮಾಡಿದ್ದು, ಇದು ವಿವಿಧ ಕಚೇರಿ ಪ್ರಕ್ರಿಯೆಗಳನ್ನು ದಾಟಿ ನ್ಯಾಯಪೀಠದ ಮುಂದೆ ವಿಚಾರಣೆಯ ಯಾದಿಯಲ್ಲಿ ನಿಗದಿಯಾಗಬೇಕಿದೆ.

ADVERTISEMENT

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು (ವಿಚಾರಣಾಧೀನ ಬಂದಿ ಸಂಖ್ಯೆ: 2261) ಕಾನೂನು ವಿಚಾರಣೆಯ ವಿವಿಧ ಹಂತಗಳ ಪ್ರಕ್ರಿಯೆಯನ್ನು ಎದುರಿಸುತ್ತಿದ್ದಾರೆ.

ಏತನ್ಮಧ್ಯೆ, ಇತ್ತೀಚೆಗಷ್ಟೇ ಹೈಕೋರ್ಟ್‌, ಶರಣರ ವಿರುದ್ಧ ಚಿತ್ರದುರ್ಗ ಜಿಲ್ಲಾ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಪ್ರಕರಣಗಳ ಸಾಕ್ಷಿ ವಿಚಾರಣಾ ಪ್ರಕ್ರಿಯೆಗೆ 2023ರ ಜುಲೈ 1ರವರೆಗೆ ತಡೆ ನೀಡಿದೆ. ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣವೇನು?: ಶಿವಮೂರ್ತಿ ಶರಣರ ವಿರುದ್ಧ ಪೊಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಸೆಷನ್ಸ್‌ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಅಂತಿಮ ವರದಿ ಸಲ್ಲಿಸಿದ್ದಾರೆ. ಇದರನ್ವಯ ನ್ಯಾಯಾಲಯ ದೋಷಾರೋಪ ಹೊರಿಸಿ ಸಾಕ್ಷಿ ವಿಚಾರಣೆ ನಡೆಸಲು ಸಜ್ಜಾಗಿರುವ ಹಂತ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.