ADVERTISEMENT

‘ಹಳೆ ಹುಲಿ’ ಕಣಕ್ಕಿಳಿಸಿದ ಹೈಕಮಾಂಡ್‌

ಶಾಮನೂರುಗೆ ದಾವಣಗೆರೆ ಲೋಕಸಭಾ ಕಾಂಗ್ರೆಸ್‌ ಟಿಕೆಟ್‌

ವಿನಾಯಕ ಭಟ್ಟ‌
Published 24 ಮಾರ್ಚ್ 2019, 20:30 IST
Last Updated 24 ಮಾರ್ಚ್ 2019, 20:30 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ವಯಸ್ಸಾಗಿದೆ ಎಂಬ ಕಾರಣಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನಿರಾಕರಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌, ಇದೀಗ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ‘ಹಳೆ ಹುಲಿ’ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನೇ ಕಣಕ್ಕಿಳಿಸಲು ಮುಂದಾಗಿದೆ.

1998ರಲ್ಲಿ ಮೊದಲ ಪ್ರಯತ್ನದಲ್ಲೇ ಶಾಮನೂರು ಶಿವಶಂಕರಪ್ಪ ಸಂಸದರಾಗಿದ್ದರು. ಬಳಿಕ ನಡೆದ ನಾಲ್ಕು ಚುನಾವಣೆಗಳಲ್ಲೂ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸತತವಾಗಿ ‘ಕಮಲ’ ಅರಳುತ್ತಿದೆ. ತಮ್ಮ ಬೀಗರಾಗಿದ್ದ ಬಿಜೆಪಿಯ ಜಿ. ಮಲ್ಲಿಕಾರ್ಜುನಪ್ಪ ಎದುರು 1999ರಲ್ಲಿ ಶಾಮನೂರು ಸೋತ ಬಳಿಕ ರಾಜ್ಯ ರಾಜಕಾರಣಕ್ಕೆ ಮರಳಿದ ಅವರು, ಒಟ್ಟು ಐದು ಬಾರಿ ಶಾಸಕರಾಗಿದ್ದಾರೆ.

2004ರಿಂದ ನಡೆದ ಮೂರು ಚುನಾವಣೆಗಳಲ್ಲೂ ಮಲ್ಲಿಕಾರ್ಜುನಪ್ಪ ಅವರ ಪುತ್ರ ಜಿ.ಎಂ. ಸಿದ್ದೇಶ್ವರ ಗೆಲುವು ಸಾಧಿಸಿದ್ದರು. ಆದರೆ, ಶಾಮನೂರು ಶಿವಶಂಕರಪ್ಪ ಅವರ ಪುತ್ರ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸತತ
ವಾಗಿ ಸೋಲಿನ ರುಚಿ ಕಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪರಾಭವಗೊಂಡ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ADVERTISEMENT

ಈ ಬಾರಿಯೂ ಟಿಕೆಟ್‌ ಅನ್ನು ಮಲ್ಲಿಕಾರ್ಜುನ ಅವರಿಗೆ ನೀಡುವಂತೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಶಿಫಾರಸು ಮಾಡಿತ್ತು. ಅವರೇ ಸ್ಪರ್ಧಿಸಲಿದ್ದಾರೆ ಎಂದೂ ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ‘ಕಮಲ’ದ ಪರಿಮಳ ಹೋಗಲಾಡಿಸಿ ಕ್ಷೇತ್ರವನ್ನು ಮತ್ತೆ ‘ಕೈ’ ಹಿಡಿತಕ್ಕೆ ತೆಗೆದುಕೊಳ್ಳಲು 88 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನೇ ಕಾಂಗ್ರೆಸ್‌ ವರಿಷ್ಠರು ನೆಚ್ಚಿಕೊಂಡಿದ್ದಾರೆ. ಮಗನಿಗಿಂತ ತಂದೆಗೇ ಜಿಲ್ಲೆಯ ಮೇಲೆ ಹೆಚ್ಚು ಹಿಡಿತ ಇದೆ ಎಂಬುದನ್ನು ಮನಗಂಡಿದ್ದಾರೆ.

‘ವಯಸ್ಸಾಗಿದೆ ಎಂಬ ಕಾರಣಕ್ಕೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದ ಹೈಕಮಾಂಡ್‌ ಈಗ ನಿಮಗೇ ಏಕೆ ಟಿಕೆಟ್‌ ಕೊಟ್ಟಿದೆ’ ಎಂದು ಶಾಮನೂರು ಶಿವಶಂಕರಪ್ಪ ಅವರನ್ನು ಭಾನುವಾರ ನೇರವಾಗಿಯೇ ಪ್ರಶ್ನಿಸಿದಾಗ, ‘ನೀವು ಹೇಳುವುದರಲ್ಲೂ ನಿಜ ಇದೆ. ಆಗ ವಯಸ್ಸಾಗಿದೆ ಎಂದು ನನ್ನನ್ನು ಕೈಬಿಟ್ಟಿದ್ದರು. ಈಗ ಗೆಲ್ಲಲು ವಯಸ್ಸಾದವರೇ ಬೇಕು ಅನಿಸಿರಬೇಕು’ ಎಂದು ನಗೆ ಬೀರಿದರು.

ಲೆಕ್ಕಾಚಾರ ಹೀಗಿರಬಹುದು: ಪ್ರಬಲ ಸ್ಪರ್ಧೆ ಒಡ್ಡಲು ಶಾಮನೂರು ಕುಟುಂಬದವರೇ ನಿಂತುಕೊಳ್ಳಬೇಕು ಎಂಬ ಸೂಚನೆಯನ್ನು ಹೈಕಮಾಂಡ್‌ ನೀಡಿತ್ತು. ಆದರೆ, ಮೂರು ಬಾರಿಯೂ ಸೋತಿದ್ದ ಕಹಿ ಅನುಭವದಿಂದ ಚುನಾವಣೆಗೆ ಸ್ಪರ್ಧಿಸಲು ಮಲ್ಲಿಕಾರ್ಜುನ ಹಿಂದೇಟು ಹಾಕುತ್ತಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಸೋತಿದ್ದ ಪುತ್ರನಿಗೆ ‘ಪುನರ್ವಸತಿ’ ಕಲ್ಪಿಸಲು ಶಾಮನೂರು ಅವರೇ ಲೋಕಸಭಾ ಚುನಾವಣೆಗೆ ನಿಲ್ಲಲು ಮುಂದಾಗಿರಬಹುದು. ತಾವು ಸಂಸದರಾದರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಿ ಸಚಿವ ಸ್ಥಾನವನ್ನೂ ಕೇಳಬಹುದು ಎಂಬ ‘ಲೆಕ್ಕಾಚಾರ’ ಹಾಕಿರಬಹುದು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅವರನ್ನೇ ಕಣಕ್ಕೆ ಕಳಿಸಿದರೆ, ಬಿಜೆಪಿಯ ಸಾಂಪ್ರದಾಯಿಕ ಲಿಂಗಾಯತ ಮತಗಳಿಗೆ ಕನ್ನ ಹಾಕಬಹುದು. ಈಗಾಗಲೇ ಸಿದ್ದೇಶ್ವರ ಮೂರು ಬಾರಿ ಆಯ್ಕೆಯಾಗಿದ್ದಾರೆ; ಹೀಗಾಗಿ ವಯಸ್ಸಾಗಿರುವ ಶಾಮನೂರು ಅವರಿಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂದು ‘ಅನುಕಂಪ’ದ ಆಧಾರದಲ್ಲಿ ಮತ ಕೇಳಬಹುದು ಎಂಬ ಲೆಕ್ಕಾಚಾರವನ್ನೂ ಹೈಕಮಾಂಡ್‌ ಮಾಡಿರುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಲಿಂಗಾಯತ ಮತದಾರರಿದ್ದಾರೆ. ನಂತರದ ಸ್ಥಾನ ಕ್ರಮವಾಗಿ ಎಲ್ಲಾ ಒಳಪಂಗಡಗಳು ಸೇರಿದ ಪರಿಶಿಷ್ಟ ಜಾತಿ, ಕುರುಬ ಹಾಗೂ ಮುಸ್ಲಿಂ ಸಮುದಾಯದ್ದಾಗಿದೆ.

ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗಿದೆ. ಶಾಮನೂರು ಅವರೇ ಸ್ಪರ್ಧಿಸಿದರೆ ಈ ಬಾರಿ ‘ಮಾವ–ಅಳಿಯ’ನ ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ ನಡೆಯಲಿದೆ.

* ನನಗೆ ಟಿಕೆಟ್‌ ಘೋಷಿಸಿರುವುದು ಆಶ್ಚರ್ಯ ತಂದಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಪಕ್ಷದ ವರಿಷ್ಠರ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ

- ಶಾಮನೂರು ಶಿವಶಂಕರಪ್ಪ, ಶಾಸಕ, ದಾವಣಗೆರೆ ದಕ್ಷಿಣ

* ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ ಪೈಕಿ ಯಾರೇ ಸ್ಪರ್ಧಿಸಿದರೂ ನಮಗೆ ವ್ಯತ್ಯಾಸವಿಲ್ಲ. ಯಾರು ಸ್ಪರ್ಧಿಸಬೇಕು ಎಂದು ಅವರೇ ನಿರ್ಧರಿಸುತ್ತಾರೆ

- ಎಚ್‌.ಬಿ. ಮಂಜಪ್ಪ,ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ

* ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ ಇಬ್ಬರದ್ದು ಸಮತೂಕದ ವ್ಯಕ್ತಿತ್ವ. ಯಾರೇ ಸ್ಪರ್ಧಿಸಿದರೂ ಗೆಲ್ಲಿಸಲು ನಮ್ಮ ಪಕ್ಷದ ಕಾರ್ಯಕರ್ತರು ಯತ್ನಿಸುತ್ತಾರೆ

- ಬಿ. ಚಿದಾನಂದಪ್ಪ, ಅಧ್ಯಕ್ಷ, ಜೆಡಿಎಸ್‌ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.