ADVERTISEMENT

ಸ್ಪರ್ಧೆಗೆ ಶಾಮನೂರು ನಕಾರ

ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್‌ಗೆ ಬುಲಾವ್‌ ನೀಡಿದ ಕೆಪಿಸಿಸಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 20:14 IST
Last Updated 28 ಮಾರ್ಚ್ 2019, 20:14 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ಕಾಂಗ್ರೆಸ್‌ ಹೈಕಮಾಂಡ್‌ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿದ್ದರೂ ಈ ಬಾರಿಯ ಚುನಾವಣೆಗೆ ತಾವು ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರೂ ಸ್ಪರ್ಧಿಸುವುದಿಲ್ಲ ಎಂಬ ಸಂದೇಶವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ರವಾನಿಸಿದ್ದಾರೆ. ‌

ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರೊಂದಿಗೆ ಸಭೆ ನಡೆಸಿದ ಶಾಮನೂರು ಶಿವಶಂಕರಪ್ಪ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಪರವಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ‘ವಯಸ್ಸಾಗಿರುವುದರಿಂದ ಓಡಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಸ್ಪರ್ಧಿಸುವುದರಿಂದ ಹಿಂದೆ ಸರಿದೆ. ಮಂತ್ರಿಗಿರಿ ಕೊಡಬೇಕಾಗಿದ್ದಾಗ ವಯಸ್ಸಾಗಿದೆ ಎನ್ನುತ್ತಿದ್ದರು; ಈಗ ನೋಡಿದರೆ ವಯಸ್ಸಾದ ನನಗೆ ಟಿಕೆಟ್‌ ಕೊಟ್ಟಿದ್ದಾರೆ. ಹೀಗಾಗಿ ಸ್ಪರ್ಧಿಸುವುದು ಬೇಡ ಎಂದುಕೊಂಡಿದ್ದೇನೆ. ಎಸ್‌.ಎಸ್‌. ಮಲ್ಲಿಕಾರ್ಜುನನೂ ನಿಲ್ಲುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಶಾಮನೂರು ಶಿವಶಂಕರಪ್ಪ ಟಿಕೆಟ್‌ ನಿರಾಕರಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್‌ ಅವರಿಗೆ ದೂರವಾಣಿ ಕರೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದ್ದಾರೆ.

‘ಶುಕ್ರವಾರ ಬೆಳಿಗ್ಗೆ ದಿನೇಶ್‌ ಗುಂಡೂರಾವ್‌ ಭೇಟಿ ಮಾಡಿ ನನ್ನ ಚಿಂತನೆಗೆ ಹಾಗೂ ರೈತ ಪರ ಹೋರಾಟಕ್ಕೆ ಶಕ್ತಿ ಸಿಗುವುದಾದರೆ ಸ್ಪರ್ಧಿಸಲು ಸಿದ್ಧ ಎಂಬುದನ್ನು ತಿಳಿಸುತ್ತೇನೆ.

ಇದರ ಜೊತೆಗೆ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ನಾಯಕರ ಸಹಮತ ಸೂಚಿಸಿದರೆ ಮಾತ್ರ ಚುನಾವಣೆಗೆ ನಿಲ್ಲುತ್ತೇನೆ’ ಎಂದು ತೇಜಸ್ವಿ ಪಟೇಲ್‌ ಪ್ರತಿಕ್ರಿಯಿಸಿದರು.

*ಮಂತ್ರಿಗಿರಿ ಕೊಡಬೇಕಾಗಿದ್ದಾಗ ವಯಸ್ಸಾಗಿದೆ ಎನ್ನುತ್ತಿದ್ದರು; ಈಗ ನೋಡಿದರೆ ವಯಸ್ಸಾದ ನನಗೆ ಟಿಕೆಟ್‌ ಕೊಟ್ಟಿದ್ದಾರೆ

- ಶಾಮನೂರು ಶಿವಶಂಕರಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.