ADVERTISEMENT

ಶರಣಗೌಡ ದೂರು: ಎಫ್‌ಐಆರ್‌ ರದ್ದು ಕೋರಿ ಬಿಎಸ್‌ವೈ ಅರ್ಜಿ

ತೀರ್ಪು ಕಾಯ್ದಿರಿಸಿದ ಕಲಬುರ್ಗಿ ‍ಪೀಠ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:42 IST
Last Updated 20 ಫೆಬ್ರುವರಿ 2019, 20:42 IST
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ   

ಕಲಬುರ್ಗಿ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ಮೂವರ ವಿರುದ್ಧ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ನೀಡಿರುವ ದೂರಿಗೆ ಸಂಬಂಧಿಸಿದ ಎಫ್‌ಐಆರ್‌ ರದ್ದುಪಡಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರ್ಗಿ ಪೀಠವು ತೀರ್ಪನ್ನು ಕಾಯ್ದಿರಿಸಿತು.

ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಹಾಸನ ಶಾಸಕ ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ.ಮರಮಕಲ್‌ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು ವಾದ ಮಂಡಿಸಿದರು.

ಒಂದೂವರೆ ಗಂಟೆ ವಾದ ಮಂಡಿಸಿದ ಸಿ.ವಿ.ನಾಗೇಶ್, ‘ಎಫ್‌ಐಆರ್ ದುರುದ್ದೇಶದಿಂದ ಕೂಡಿದ್ದು, ಅದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಆದ್ದರಿಂದ ಅದನ್ನು ರದ್ದು ಮಾಡಬೇಕು’ ಎಂದು ಕೋರಿದರು.

ADVERTISEMENT

‘ಎಫ್‌ಐಆರ್ ರದ್ದು ಮಾಡಬಾರದು ಮತ್ತು ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಂದೇಶ ಜೆ.ಚೌಟಾ ಪ್ರತಿಪಾದಿಸಿದರು.

ವಾದ– ವಿವಾದ ಆಲಿಸಿದ ನ್ಯಾಯಮೂರ್ತಿ ಪಿ.ಜಿ.ಎಂ.ಪಾಟೀಲ ಅವರ ಪೀಠ ತೀರ್ಪನ್ನು ಕಾಯ್ದಿರಿಸಿತು.

ಶಾಸಕ ಶ್ರೀನಿವಾಸಗೌಡಗೆ ಎಸಿಬಿ ನೋಟಿಸ್‌
ಬೆಂಗಳೂರು: ‘ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಿಸಿ, ಪಕ್ಷಾಂತರಕ್ಕೆ ಪ್ರಚೋದಿಸಲು ಬಿಜೆಪಿ ನಾಯಕರು ₹ 25 ಕೋಟಿ ಆಮಿಷವೊಡ್ಡಿ, ₹ 5 ಕೋಟಿ ಮುಂಗಡ ನೀಡಿದ್ದರು’ ಎಂಬ ಹೇಳಿಕೆ ನೀಡಿದ್ದ ಕೋಲಾರದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಬುಧವಾರ ಜಾರಿ ಮಾಡಿರುವ ನೋಟಿಸ್‌ನಲ್ಲಿ ಗುರುವಾರ (ಫೆ.21) ಬೆಳಿಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಆದರೆ, ಒಂದು ತಿಂಗಳ ಕಾಲಾವಕಾಶ ನೀಡುವಂತೆ ಶ್ರೀನಿವಾಸಗೌಡ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸಿಬಿ ಅಧಿಕಾರಿಗಳು ಸೋಮವಾರ ನೋಟಿಸ್‌ ನೀಡಲು ಪ್ರಯತ್ನಿಸಿದ್ದರು. ಅದನ್ನು ಶಾಸಕರು ತೆಗೆದುಕೊಳ್ಳಲಿಲ್ಲ. ಮಂಗಳವಾರ ಜಾರಿ ಮಾಡುವ ಪ್ರಯತ್ನವೂ ಫಲಿಸಲಿಲ್ಲ. ಅಂತಿಮವಾಗಿ ಬುಧವಾರ ಜಾರಿ ಮಾಡಲಾಯಿತು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಗುರುಮಿಠಕಲ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ಸೇರಲು ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿದ್ದರು ಎನ್ನಲಾದ ಸಮಯದಲ್ಲೇ ಶ್ರೀನಿವಾಸಗೌಡ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಿದ್ದರು. ಮಾಧ್ಯಮಗಳಲ್ಲಿ ಅವರ ಹೇಳಿಕೆ ಪ್ರಕಟವಾಗಿತ್ತು.

‘ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್‌ ತಮಗೆ ₹ 5 ಕೋಟಿ ಮುಂಗಡ ನೀಡಿದ್ದರು. ಇದನ್ನು ಎರಡು ತಿಂಗಳು ಮನೆಯಲ್ಲೇ ಇಟ್ಟುಕೊಂಡಿದ್ದೆ. ಆನಂತರ ಅದನ್ನು ಹಿಂತಿರುಗಿಸಿದ್ದೆ’ ಎಂದು ಶ್ರೀನಿವಾಸಗೌಡ ಹೇಳಿದ್ದರು.

ಶಾಸಕರ ವಿಚಾರಣೆ ಬಳಿಕ ಅಶ್ವತ್ಥ ನಾರಾಯಣ, ವಿಶ್ವನಾಥ್‌ ಹಾಗೂ ಯೋಗೀಶ್ವರ್‌ ಅವರಿಗೆ ನೋಟಿಸ್‌ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಶ್ರೀನಿವಾಸಗೌಡ ವಿಚಾರಣೆಗೆ ಹಾಜರಾಗದಿದ್ದರೆ ನೇರವಾಗಿ ಮೊಕದ್ದಮೆ ದಾಖಲಿಸುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕರಿಂದ ಐದು ಕೋಟಿ ಹಣ ಪಡೆದಿದ್ದಾಗಿ ಹೇಳಿಕೆ ನೀಡಿದ್ದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಂಚ ಮುಕ್ತ ಕರ್ನಾಟಕ ವೇದಿಕೆ ಸಂಚಾಲಕ ರವಿಕೃಷ್ಣಾರೆಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಹನುಮೇಗೌಡ ಮತ್ತು ಪ್ರಶಾಂತ್‌ ಎಸಿಬಿಗೆ ಪ್ರತ್ಯೇಕ ದೂರುಗಳನ್ನು ನೀಡಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.