ADVERTISEMENT

ಸವದತ್ತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್ ಯೋಜನೆ: 65,000 ಮರಗಳಿಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 22:10 IST
Last Updated 19 ಜೂನ್ 2025, 22:10 IST
<div class="paragraphs"><p>ಜಲಾಶಯ</p></div>

ಜಲಾಶಯ

   

ಬೆಂಗಳೂರು: ಬೆಳಗಾವಿಯ ಸವದತ್ತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್ ಯೋಜನೆಗೆ ಸುಮಾರು 65,000 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ಯೋಜನೆಯ ಗುತ್ತಿಗೆ ಪಡೆದಿರುವ ಗ್ರೀನ್‌ಕೋ ಕಂಪನಿಯು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ವಿವರಿಸಿದೆ.

ಯೋಜನೆಗೆ ಆರಂಭಿಕ ಹಂತದಲ್ಲಿ 5,087 ಮರಗಳನ್ನು ತೆಗೆಯಬೇಕಾಗುತ್ತದೆ ಎಂದು ಹೇಳಲಾಗಿತ್ತು. ಈಗ ಕತ್ತರಿಸಬೇಕಾದ ಮರಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ.

ADVERTISEMENT

ಬೆಳಗಾವಿಯ ರೇಣುಕಾಸಾಗರ ಜಲಾಶಯದ ಹಿನ್ನೀರಿನ ಸಮೀಪ ಈ ಘಟಕವನ್ನು ನಿರ್ಮಿಸುವ ಯೋಜನೆಯನ್ನು 2018ರಲ್ಲಿ ಮೊದಲ ಬಾರಿಗೆ ಪ್ರಸ್ತಾವಿಸಲಾಗಿತ್ತು. ಆರಂಭದಲ್ಲಿ 1,260 ಮೆಗಾವಾಟ್‌ ಜಲವಿದ್ಯುತ್ ಘಟಕ ಸ್ಥಾಪಿಸುವ ಗುರಿ ಇತ್ತು. ಈ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯವು 2022ರಲ್ಲಿ ಪರಿಸರ ಅನುಮತಿಯನ್ನೂ ನೀಡಿತ್ತು.

ರೇಣುಕಾಸಾಗರ ಜಲಾಶಯದ ಹಿನ್ನೀರಿನ ಸಮೀಪ ಎತ್ತರದ ಪ್ರದೇಶದಲ್ಲಿ ಒಂದು ಜಲಾಶಯ ಮತ್ತು ತಗ್ಗಿನ ಪ್ರದೇಶದಲ್ಲಿ ಮತ್ತೊಂದು ಜಲಾಶಯ ನಿರ್ಮಿಸುವುದು. ಎತ್ತರದಲ್ಲಿರುವ ಜಲಾಶಯದಲ್ಲಿನ ನೀರನ್ನು ಬೃಹತ್ ಕೊಳವೆಗಳ ಮೂಲಕ ಕಿರು ಜಲಾಶಯಕ್ಕೆ ಹಾಯಿಸುವುದು. ನೀರು ಹಾದು ಹೋಗುವ ಕೊಳವೆ ಮಾರ್ಗದಲ್ಲಿ ಟರ್ಬೈನ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಸ್ವರೂಪ.

ಗ್ರೀನ್‌ಕೋ ಕಂಪನಿಯು ಮೊದಲ ಬಾರಿಗೆ ಪರಿಸರ ಅನುಮತಿಗೆ ಪ್ರಸ್ತಾವ ಸಲ್ಲಿಸಿದ್ದಾಗ, ಯೋಜನೆ ಅನುಷ್ಠಾನಕ್ಕೆ ಸುಮಾರು 510 ಎಕರೆ ಸ್ಥಳ ಬೇಕಾಗುತ್ತದೆ ಎಂದು ತಿಳಿಸಿತ್ತು. ಈಗ ಪರಿಷ್ಕೃತ ಯೋಜನೆಯಡಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 1,600 ಮೆಗಾವಾಟ್‌ಗೆ ಹೆಚ್ಚಿಸಲಾಗಿದ್ದು, 759 ಎಕರೆ ಪ್ರದೇಶ ಬೇಕಾಗುತ್ತದೆ ಎಂದು ನೂತನ ಪ್ರಸ್ತಾವದಲ್ಲಿ ವಿವರಿಸಿದೆ. 

‘ಕಂಪನಿಯು ತನ್ನ ಪ್ರಸ್ತಾವದಲ್ಲಿ ಉಲ್ಲೇಖಿಸಿರುವ 759 ಎಕರೆಯಲ್ಲಿ 395 ಎಕರೆ–39 ಗುಂಟೆಯಷ್ಟು ಅರಣ್ಯ ಪ್ರದೇಶವೇ ಬರುತ್ತದೆ. ಈ ಪ್ರದೇಶದಲ್ಲಿ ಇರುವ 64,454 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ. ಹಿನ್ನೀರಿನ ಸಮೀಪದಲ್ಲಿ ಅರಣ್ಯೇತರ ಜಮೀನೂ ಇದ್ದು, ಅದನ್ನೇ ಯೋಜನೆಗೆ ನೀಡಬಹುದಿತ್ತು. ಅರಣ್ಯ ಪ್ರದೇಶವನ್ನೇ ಏಕೆ ನೀಡಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂಬುದು ಅರಣ್ಯ ಇಲಾಖೆಯ ಗೋಕಾಕ ವಲಯದ ಅಧಿಕಾರಿಗಳ ಕಳವಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.