
ಬೆಂಗಳೂರು: ‘ವಯೋಸಹಜ ದೈಹಿಕ ಆಕರ್ಷಣೆಗೆ ಒಳಗಾಗುವ ಕೆಲವು ಯುವಕರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳಲ್ಲಿ ಸಿಲುಕಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ನಗರದ ಮಾಗಡಿ ರಸ್ತೆಯ ಬಿಜಿಎ ಪ್ರಥಮ ದರ್ಜೆ ಕಾಲೇಜು ಮತ್ತು ಸಂಯುಕ್ತ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ವರ್ವ್ ಫೌಂಡೇಷನ್’ ಹಾಗೂ ಜಿಬಿಎ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ದೇಶವನ್ನು ನಾಶ ಮಾಡಲು ಕ್ಷಿಪಣಿ ಅಥವಾ ಬಾಂಬ್ ಹಾಕಬೇಕಿಲ್ಲ. ಅಲ್ಲಿನ ಯುವಜನರಿಗೆ ಮಾದಕ ವಸ್ತುಗಳ ಚಟ ಅಂಟಿಸಿದರೆ ಸಾಕು, ಆ ದೇಶ ತನ್ನಿಂತಾನೇ ನಾಶವಾಗುತ್ತದೆ’ ಎಂದರು.
‘ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕ್ಲಬ್‌ಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಆರಂಭಿಸುತ್ತಿದೆ. ಈ ಮೂಲಕ ಶೋಷಿತರು, ದುರ್ಬಲರು, ಅನ್ಯಾಯಕ್ಕೆ ಒಳಗಾದವರನ್ನು ಗುರುತಿಸಿ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಅಂತೆಯೇ, ವ್ಯಾಜ್ಯಗಳನ್ನು ಗ್ರಾಮ ಮಟ್ಟದಲ್ಲಿಯೇ ಬಗೆಹರಿಸುವ ಮೂಲಕ ವ್ಯಾಜ್ಯಮುಕ್ತ ಗ್ರಾಮಗಳನ್ನು ನಿರ್ಮಿಸುವ ಗುರಿ ಇದೆ’ ಎಂದು ಅವರು ಹೇಳಿದರು.
ಜಿಬಿಎ ಹಿರಿಯ ಸಹಾಯಕ ನಿರ್ದೇಶಕ ಎಂ.ಮುನಿಶಾಮಪ್ಪ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಆನಂದ್ ಮತ್ತು ಜಿಬಿಎ ಸಂಯುಕ್ತ ಪಿ.ಯು ಕಾಲೇಜಿನ ಪ್ರಾಂಶುಪಾಲ ಬಾಲು, ವರ್ವ್ ಫೌಂಡೇಷನ್ ಅಧ್ಯಕ್ಷ ಸಿ.ವಿ.ತಿರುಮಲ ರಾವ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.