ADVERTISEMENT

ಶೇಖರ್‌ ಮತ್ತೆ ಬುಡಾ ಅಧ್ಯಕ್ಷ

ಬಿಜೆಪಿಯಲ್ಲಿ ಸಂಚಲನ: ಶಾಸಕ ರೆಡ್ಡಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 19:40 IST
Last Updated 29 ಜನವರಿ 2021, 19:40 IST

ಬಳ್ಳಾರಿ: ಬುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ.ಎ.ರಾಮಲಿಂಗಪ್ಪ ಅವರನ್ನು ಕೇವಲ ಎರಡೇ ದಿನದೊಳಗೆ ಆ ಸ್ಥಾನದಿಂದ ತೆಗೆದು ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಈ ಮುಂಚೆ ಇದ್ದ ದಮ್ಮೂರು ಪ್ರಕಾಶ್‌ ಅವರನ್ನೇ ಬುಡಾಗೆ ನೇಮಿಸಲಾಗಿದೆ. ಆದರೆ ರಾಮಲಿಂಗಪ್ಪ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷರ ಬದಲಾವಣೆ ಪ್ರಕರಣವುಶಾಸಕ ಜಿ.ಸೋಮಶೇಖರರೆಡ್ಡಿ ಬೆಂಬಲಿಗರ ಗುಂಪು ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡರ ಗುಂಪಿನ ನಡುವೆ ಅಸಮಾಧಾನಕ್ಕೆ ದಾರಿ ಮಾಡಿದೆ.

‘ಶಾಸಕ ರೆಡ್ಡಿಯವರ ಆಪ್ತ ಶೇಖರ್ ಅವರಿಗೆ ಮತ್ತೊಮ್ಮೆ ಮಣೆ ಹಾಕುವ ಮೂಲಕ ಪಕ್ಷ ನಿಷ್ಠೆಗೆ ಅನ್ಯಾಯ ಮಾಡಲಾಗಿದೆ’ ಎಂದಿರುವ ರಾಮಲಿಂಗಪ್ಪ, ವಾಡಾ ಅಧ್ಯಕ್ಷ ಸ್ಥಾನವನ್ನು ಸಂಡೂರು ಭಾಗದವರಿಗೆ ಕೊಡಲಿ’ ಎಂದು ಹೇಳಿದ್ದಾರೆ.

ADVERTISEMENT

ರಾಮಲಿಂಗಪ್ಪ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ಜ.27ರಂದು ಹೊರಡಿಸಿದ್ದ ಆದೇಶವನ್ನು ನಗರಾಭಿವೃದ್ಧಿ ಇಲಾಖೆಯು ರದ್ದುಪಡಿಸಿ, ಮತ್ತೆ ದಮ್ಮೂರು ಶೇಖರ್‌ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿ ಜ.29ರಂದು ಆದೇಶಿಸಿದೆ. ಇಲಾಖೆಯು ನೇಮಕಾತಿ ಆದೇಶ ಹೊರಡಿಸಿದ ಕೂಡಲೇ ರಾಮಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು.

2019ರ ಅಕ್ಟೋಬರ್‌ನಲ್ಲಿ ದಮ್ಮೂರು ಶೇಖರ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ಕೂಡಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದಿಯಾಗಿ 40 ಮಂದಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ಶೇಖರ್‌ ಅವರ ನೇಮಕಾತಿಯನ್ನು ಆದೇಶ ಹೊರಡಿಸಿದ ದಿನವೇ ರದ್ದುಪಡಿಸಲಾಗಿತ್ತು. ಎರಡನೇ ಬಾರಿ ಶೇಖರ್‌ ಅವರನ್ನು ನೇಮಿಸಲಾಗಿತ್ತು. ಅವರು ಮುಂದುವರಿಯುತ್ತಿರುವಾಗಲೇ ಸರ್ಕಾರ ರಾಮಲಿಂಗಪ್ಪ ಅವರನ್ನು ನೇಮಿಸಿ, ಆದೇಶವನ್ನು ರದ್ದುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.