ಬೆಂಗಳೂರು: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಬೇಕು ಮತ್ತು ಪಕ್ಷದ ಸಂಘಟನೆಯಲ್ಲೂ ಪ್ರಮುಖ ಸ್ಥಾನಗಳನ್ನು ನೀಡಬೇಕು ಎಂದು ಬಿಜೆಪಿಯಲ್ಲಿನ ಕುರುಬ ಸಮುದಾಯದ ನಾಯಕರು ಒತ್ತಾಯಿಸಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆಯಬೇಕು ಮತ್ತು ಕೆ.ಎಸ್.ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಸಂಬಂಧ ವರಿಷ್ಠರು ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಈಶ್ವರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರು. ಕಳೆದ ಚುನಾವಣೆ ಸಂದರ್ಭದಲ್ಲಿ ಅವರನ್ನು ಉಚ್ಚಾಟಿಸಲಾಯಿತು. ರಾಜ್ಯದ ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯ ಅವರ ನಂತರದ ಅತಿದೊಡ್ಡ ನಾಯಕ ಈಶ್ವರಪ್ಪ. ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದರೆ ದೊಡ್ಡ ಶಕ್ತಿ ತಂದಂತಾಗುತ್ತದೆ. ಅವರು ಸದಾ ಪಕ್ಷ ನಿಷ್ಠರು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಇನ್ನು ಒಂದೆರಡು ತಿಂಗಳಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಸಿ ಪಕ್ಷದ ವರಿಷ್ಠರಿಗೂ ಆಹ್ವಾನ ನೀಡುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ಪಕ್ಷದ ನಾಯಕರಾದ ಶಾಸಕರಾದ ಬೈರತಿ ಬಸವರಾಜು, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಮಾಜಿ ಸಚಿವ ವರ್ತೂರು ಪ್ರಕಾಶ್ ಮತ್ತು ಇತರರು ಇದ್ದರು. ವಿವಿಧ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.