ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣ: ಯೋಜನಾ ವೆಚ್ಚ ₹150 ಕೋಟಿಗೆ ಏರಿಕೆ?

ಕಾಮಗಾರಿಗೆ 4 ಜಿ ವಿನಾಯ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 21:39 IST
Last Updated 14 ಡಿಸೆಂಬರ್ 2019, 21:39 IST
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ನಡೆಸಿದ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಶಿವಕುಮಾರ್, ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್,  ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಪಿ.ರವಿಕುಮಾರ್ ಪಾಲ್ಗೊಂಡಿದ್ದರು
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ನಡೆಸಿದ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಶಿವಕುಮಾರ್, ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್,  ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಪಿ.ರವಿಕುಮಾರ್ ಪಾಲ್ಗೊಂಡಿದ್ದರು   

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನಾ ವೆಚ್ಚವನ್ನು ₹40 ಕೋಟಿಗಳಿಂದ ₹150 ಕೋಟಿಗೆ ಏರಿಸುವ ಜತೆಯಲ್ಲಿ, ಗುತ್ತಿಗೆದಾರರಿಗೆ 4 ಜಿ ವಿನಾಯಿತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತ ಸಭೆಯಲ್ಲಿ ವಿಮಾನ ನಿಲ್ದಾಣ, ರಸ್ತೆ, ರೈಲ್ವೆ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಭೆಯಲ್ಲಿ ಯೋಜನಾ ವೆಚ್ಚ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ರೂಪುಗೊಂಡಿತ್ತು. 2011ರಲ್ಲಿ ₹40 ಕೋಟಿ ಇದ್ದ ಮೊತ್ತವನ್ನು 8 ವರ್ಷಗಳಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ADVERTISEMENT

ಪ್ರವಾಹ, ಭೂಕಂಪ, ಚಂಡಮಾರುತ, ಬೆಂಕಿ ಅವಘಡದಂತಹ ನೈಸರ್ಗಿಕ ವಿಕೋಪ ಸಂಭವಿಸಿದಾಗ ತುರ್ತು ಪರಿಹಾರ ಕೈಗೊಳ್ಳಲಾಗುತ್ತದೆ. ಯಾವುದಾದರೂ ಕಾಮಗಾರಿಗಳನ್ನು ಅತಿ ತುರ್ತಾಗಿ ಕೈಗೊಳ್ಳಬೇಕಾಗುತ್ತದೆ.

ಅಂತಹ ಹೊತ್ತಿನಲ್ಲಿ ಟೆಂಡರ್‌, ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿ ಪಾರದರ್ಶಕತೆ ಕಾಯ್ದೆಯ ನಿಯಮಗಳ ಅಡೆತಡೆ ಬರಬಾರದು ಎಂಬ ಕಾರಣಕ್ಕೆ 4 ಜಿ ಅಡಿ ವಿನಾಯ್ತಿ ನೀಡುವ ಪರಿಪಾಟ ಇದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಈ ಹೊತ್ತಿನಲ್ಲಿ 4 ಜಿ ವಿನಾಯಿತಿ ನೀಡುವ ತುರ್ತು ಏನಿದೆ ಎಂಬ ಪ್ರಶ್ನೆಗಳೂ ಎದ್ದಿವೆ.

ರನ್‌ವೇ ಉದ್ದವನ್ನು ಈ ಹಿಂದೆ ಉದ್ದೇಶಿಸಿದ್ದ 1.20 ಕಿ.ಮೀ ಯಿಂದ 2.10 ಕಿ.ಮೀಗೆ ಹೆಚ್ಚಿಸಲು ಹಾಗೂ ಇದಕ್ಕೆ ಆಗಲಿರುವ ವೆಚ್ಚವನ್ನು ರಾಜ್ಯ ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಯಿತು.

₹45 ಕೋಟಿ ವೆಚ್ಚದಲ್ಲಿ ‘ಸ್ವಾತಂತ್ರ್ಯ ಉದ್ಯಾನ’
ಶಿವಮೊಗ್ಗ ನಗರದಲ್ಲಿರುವ ಹಳೆ ಜೈಲಿನ ಆವರಣದಲ್ಲಿ ಬೆಂಗಳೂರಿನ ಮಾದರಿಯಲ್ಲಿ ಸ್ವಾತಂತ್ರ್ಯ ಉದ್ಯಾನ ನಿರ್ಮಿಸುವ ಯೋಜನೆಗೆ ಸಭೆ ಅನುಮೋದನೆ ನೀಡಿದೆ.

ಈ ಯೋಜನೆಗೆ ₹45 ಕೋಟಿ ವೆಚ್ಚವಾಗಲಿದ್ದು, ಹಳೆ ಜೈಲು ಆವರಣವನ್ನು ಜನಾಕರ್ಷಣೆಯ ಕೇಂದ್ರವಾಗಿ ರೂಪಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.