ADVERTISEMENT

ದೈಹಿಕವಾಗಿ ಬಳಲಿದ್ದ ಸಚಿವರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:29 IST
Last Updated 22 ಮಾರ್ಚ್ 2019, 20:29 IST
   

ಹುಬ್ಬಳ್ಳಿ: ‘ಧಾರವಾಡದಲ್ಲಿ ಕಟ್ಟಡ ಕುಸಿದು, ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಚಿವರು, ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರವಾಗಿ ಬಳಲಿದ್ದರು’ ಎಂದು ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

‘ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಗುರುವಾರ ಸಂಜೆ ಆರೂವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ತಾವು ಬಳಲಿರುವುದನ್ನು ನನ್ನ ಗಮನಕ್ಕೆ ತಂದಿದ್ದರು. ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಲಾಗಿತ್ತು. ಆದರೆ, ಬೆಳಿಗ್ಗೆ ಬರುವುದಾಗಿ ಹೇಳಿ ಹೋಗಿದ್ದರು’ ಎಂದರು.

‘ಮಧ್ಯಾಹ್ನ 12.30ರ ಸುಮಾರಿಗೆ ಸಚಿವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ಅವರ ಕುಟುಂಬದವರು ಫೋನ್‌ ಮಾಡಿ ವಿಷಯ ತಿಳಿಸಿದರು. ತಕ್ಷಣ ಸಿಬ್ಬಂದಿಯೊಂದಿಗೆ ಅವರ ಮನೆಗೆ ಹೋದಾಗ ನಮ್ಮೆದುರೆ ವಾಂತಿ ಮಾಡಿಕೊಂಡು ಕುಸಿದುಬಿದ್ದರು. ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ. ಸಮೀಪದಲ್ಲೇ ಇದ್ದ ಲೈಫ್‌ಲೈನ್‌ ಆಸ್ಪತ್ರೆಗೆ ಆಂಬುಲೆನ್ಸ್‌ ಮೂಲಕ ಕರೆದೊಯ್ದು, ಮಧ್ಯಾಹ್ನ 1.30ಕ್ಕೆ ದಾಖಲಿಸಿದೆವು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು’ ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್‌ ಎಂದು ತಿಳಿಸಿದರು.

ADVERTISEMENT

1998ರಿಂದಲೂ ಶಿವಳ್ಳಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಕಿಮ್ಸ್‌ ವೈದ್ಯ ಡಾ.ಡಿ.ಎಂ.ಕಬಾಡೆ, ‘2005ರಲ್ಲೇ ಶಿವಳ್ಳಿ ಅವರಿಗೆ ಸ್ಟಂಟ್‌ ಅಳವಡಿಸಲಾಗಿತ್ತು. ಒಂದು ವರ್ಷದ ಹಿಂದೆ ಸಚಿವರಿಗೆ ಬೈಪಾಸ್‌ ಸರ್ಜರಿ ಕೂಡ ಆಗಿತ್ತು. ಈ ನಡುವೆ ಅವರಿಗೆ ಮೂರ್ನಾಲ್ಕು ಬಾರಿ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವಾಗಿತ್ತು. ಸಕ್ಕರೆ ಮತ್ತು ರಕ್ತದೊತ್ತಡವೂ ಇತ್ತು’ ಎಂದು ಹೇಳಿದರು.

ಅಂತಿಮ ಸಂಸ್ಕಾರ ಇಂದು:

ಸಚಿವರ ಹುಟ್ಟೂರಾದ ಯರಗುಪ್ಪಿಯಲ್ಲಿ ಶನಿವಾರ ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕಾಂಗ್ರೆಸ್‌ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಪಾಟೀಲ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತಿತರರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.