ADVERTISEMENT

Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ: ಲೋಕಾರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 0:30 IST
Last Updated 27 ಫೆಬ್ರುವರಿ 2023, 0:30 IST
   

ಶಿವಮೊಗ್ಗ: ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ.

ಶಿವಮೊಗ್ಗ– ಭದ್ರಾವತಿ ನಗರಗಳ ಮಧ್ಯೆ ಇರುವ ಸೋಗಾನೆ ಬಳಿ ₹449.22 ಕೋಟಿ ವೆಚ್ಚದಲ್ಲಿ 778.62 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.

2007ರಲ್ಲಿ ಬಿ.ಎಸ್‌.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಮೊದಲು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ ಸರಿದಿದ್ದರು. ನಂತರ ಬಂದ ಸರ್ಕಾರಗಳು ಆಸಕ್ತಿ ತೋರದ ಕಾರಣ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು.

ADVERTISEMENT

2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್‌ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು. ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಯೋಜನಾ ವೆಚ್ಚ ₹ 220 ಕೋಟಿಯಿಂದ ₹449.22 ಕೋಟಿಗೆ ಏರಿಕೆಯಾಯಿತು.

ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೂ ಮೋದಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.