ADVERTISEMENT

ಅಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ತಕ್ಷಣ ಬಂಧಿಸಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 8:49 IST
Last Updated 21 ಫೆಬ್ರುವರಿ 2022, 8:49 IST
   

ಬೆಂಗಳೂರು: ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಅವರನ್ನು ತಕ್ಷಣ ಬಂಧಿಸಬೇಕು. ಗಲ್ಲು ಶಿಕ್ಷೆಯಾಗುವಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸೌಧದ ಬಳಿ ಸುದ್ದಿಗಾರರ ಜತೆ ಮತನಾಡಿದ ಅವರು ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲೇ ಕೊಲೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

‘ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ಯಾರೇ ಕೊಲೆಯಾದರೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಹರ್ಷ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಇದಕ್ಕೆ ಜವಾಬ್ದಾರರು’ ಎಂದರು.

ADVERTISEMENT

‘ಪೊಲೀಸರು ಅಪರಾಧಿಗಳನ್ನು ಮೊದಲು ಬಂಧಿಸಬೇಕು. ಕಠಿಣ ಶಿಕ್ಷ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ. ಆರಗ ಭಂಡರು. ರಾಜೀನಾಮೆ ಕೊಡುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ಕೊಟ್ಟಿದ್ದರು. ರಾಜಿನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.