
ಬಸನಗೌಡ ಪಾಟೀಲ ಯತ್ನಾಳ್
ಬೆಂಗಳೂರು: ರಾಜ್ಯ ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.
‘ನನ್ನ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡದಂತೆ ಯತ್ನಾಳ್ ಅವರಿಗೆ ಶಾಶ್ವತ ನಿರ್ಬಂಧ ಹೇರಬೇಕು’ ಎಂದು ಕೋರಿ ಶಿವಾನಂದ ಪಾಟೀಲ ಸಲ್ಲಿಸಿರುವ ಅಸಲು ದಾವೆಯನ್ನು ನಗರದ 27ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಿತು.
ದಾವೆದಾರ ಶಿವಾನಂದ ಪಾಟೀಲ ಅವರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದ ನ್ಯಾಯಾಲಯ ಪ್ರತಿವಾದಿ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಲಾಗಿದೆ.
ಪ್ರಾರ್ಥನೆ: ‘ಯತ್ನಾಳ್ ಅವರು ಹಲವು ಟಿ.ವಿ ಸಂದರ್ಶನಗಳಲ್ಲಿ ನನ್ನ ವಿರುದ್ಧ ಸುಳ್ಳು, ಆಧಾರರಹಿತ, ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಈ ಮೂಲಕ ನನ್ನ ಗೌರವ, ಘನತೆ ಮತ್ತು ಖ್ಯಾತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ, ಯತ್ನಾಳ್ ಅವರು ನನ್ನ ವಿರುದ್ಧ ಯಾವುದೇ ಅವಹೇಳಕಾರಿ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಬೇಕು’ ಎಂದು ಶಿವಾನಂದ ಪಾಟೀಲ ದಾವೆಯಲ್ಲಿ ಪ್ರಾರ್ಥಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.