ADVERTISEMENT

ವಸತಿ ಉದ್ದೇಶಕ್ಕೆ 10 ಸೆಂಟ್ಸ್ ಜಮೀನು ಭೂ ಪರಿವರ್ತನೆಗೆ ಅವಕಾಶ: ಹೆಬ್ಬಾರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 13:03 IST
Last Updated 19 ಮಾರ್ಚ್ 2021, 13:03 IST
ಶಿವರಾಮ ಹೆಬ್ಬಾರ್‌
ಶಿವರಾಮ ಹೆಬ್ಬಾರ್‌    

ಬೆಂಗಳೂರು: ಹತ್ತು ಸೆಂಟ್ಸ್‌ವರೆಗಿನ ಕೃಷಿ ವಲಯದ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲು ರಾಜ್ಯವ್ಯಾಪಿ ಏಕರೂಪದ ನಿಯಮ ಜಾರಿ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಕೆ.ರಘುಪತಿ ಭಟ್ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪರವಾಗಿ ಹೆಬ್ಬಾರ್‌ ಉತ್ತರ ನೀಡಿ, 10 ಸೆಂಟ್ಸ್‌ (4356 ಚದರಡಿ) ಭೂಪರಿವರ್ತನೆ ಸಂಬಂಧ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ನಗರಾಭಿವೃದ್ಧಿ ಸಚಿವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮಂಗಳವಾರವೇ ಸಭೆ ನಡೆಯಲಿದೆ ಎಂದರು.

ಉಡುಪಿ, ಮಂಗಳೂರು ಮತ್ತು ರಾಜ್ಯದ ಎಲ್ಲ ನಗರಾಭಿವೃದ್ಧಿಗಳ ವ್ಯಾಪ್ತಿಗೆ ಅನ್ವಯವಾಗುವಂತೆ ಏಕರೂಪದ ನಿಯಮಾವಳಿ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷರು, ನಿಯಮಾವಳಿಯಲ್ಲಿ ತಾರತಮ್ಯ ಕಾಣುತ್ತಿದೆ. ಆದ್ದರಿಂದ ಕೇಂದ್ರೀಕೃತ ವ್ಯವಸ್ಥೆಯ ಬದಲಿಗೆ ವಿಕೇಂದ್ರೀಕೃತ ವ್ಯವಸ್ಥೆ ಜಾರಿ ತರಬೇಕು. 10 ಸೆಂಟ್ಸ್‌ ಭೂ ಪರಿವರ್ತನೆಗೆ ಬೆಂಗಳೂರಿಗೆ ಬರುವ ಸ್ಥಿತಿ ಇರಬಾರದು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಏಕರೂಪದ ಕಾನೂನು ತರಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಹೇಳಿದರು.

ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್‌, ಉಡುಪಿಯಲ್ಲಿ ಕೃಷಿ ವಲಯದ 10 ಸೆಂಟ್ಸ್‌ ಭೂಮಿ ಪರಿವರ್ತನೆ ಮಾಡಲು ಸಾಧ್ಯವಾಗದೇ 2 ಸಾವಿರಕ್ಕೂ ಹೆಚ್ಚು ಜನ ತೊಂದರೆಗೆ ಸಿಲುಕಿದ್ದಾರೆ. ಈ ಸಂಬಂಧ ನಗರಸಭೆ ನಿರ್ಣಯ ತೆಗೆದುಕೊಂಡಿದ್ದರೂ, ಎರಡು ವರ್ಷಗಳಿಂದ ಇತ್ಯರ್ಥವಾಗಿಲ್ಲ. ಬ್ರೋಕರ್‌ಗಳನ್ನು ಹಿಡಿದರೆ ಮಾತ್ರ ಕೆಲಸವಾಗುತ್ತದೆ. ಇಲ್ಲವಾದರೆ, ಹತ್ತು ಸೆಂಟ್ಸ್‌ ಜಾಗದ ಪರಿವರ್ತನೆಗೆ ರಾಜಧಾನಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಕೆ.ಜಿ.ಬೋಪಯ್ಯ, ಭೂಪರಿವರ್ತನೆಯಾಗದೇ ಬ್ಯಾಂಕುಗಳಲ್ಲಿ ಸಾಲವೂ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಮತ್ತೊಬ್ಬ ಶಾಸಕ ಅಭಯಪಾಟೀಲ ಮಾತನಾಡಿ, ‘ಇದರ ಹಿಂದೆ ದೊಡ್ಡ ರ್‍ಯಾಕೆಟ್‌ ಇದೆ. ನನ್ನ ಜಮೀನನ್ನೇ ಒಂದೂವರೆ ವರ್ಷದಿಂದ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶಾಸಕರಾದ ನಮ್ಮ ಸ್ಥಿತಿಯೇ ಹೀಗಾದರೆ ಉಳಿದವರ ಕಥೆ ಏನು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.