ADVERTISEMENT

ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಯೋಜನೆ | ಮೆಟ್ರೊಗೆ 55 ಎಕರೆ ನೀಡಿ: ಶೋಭಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 15:21 IST
Last Updated 19 ಜುಲೈ 2025, 15:21 IST
ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಹಬ್‌ ನಿರ್ಮಾಣಕ್ಕೆಂದು ಸ್ವಾಧೀನಕ್ಕೆ ಪಡೆಯಲಾದ ಪ್ರದೇಶದಲ್ಲಿ ಇರುವ ಗುಜರಿ ವಸ್ತುಗಳ ರಾಶಿಯನ್ನು ಶೋಭಾ ಕರಂದ್ಲಾಜೆ ಪರಿಶೀಲಿಸಿದರು
ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಹಬ್‌ ನಿರ್ಮಾಣಕ್ಕೆಂದು ಸ್ವಾಧೀನಕ್ಕೆ ಪಡೆಯಲಾದ ಪ್ರದೇಶದಲ್ಲಿ ಇರುವ ಗುಜರಿ ವಸ್ತುಗಳ ರಾಶಿಯನ್ನು ಶೋಭಾ ಕರಂದ್ಲಾಜೆ ಪರಿಶೀಲಿಸಿದರು   

ಬೆಂಗಳೂರು: ‘ಹೆಬ್ಬಾಳದಲ್ಲಿ ಮಲ್ಟಿಮೋಡ್‌ ಟ್ರಾನ್ಸ್‌ಪೋರ್ಟ್‌ ಹಬ್‌ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಪಡೆದಿರುವ 55 ಎಕರೆಯನ್ನು ಪೂರ್ಣವಾಗಿ ಬಿಎಂಆರ್‌ಸಿಎಲ್‌ಗೆ ನೀಡಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಹೆಬ್ಬಾಳದಲ್ಲಿ ಬಿಎಂಆರ್‌ಸಿಎಲ್‌ಗೆ ನೀಡಿರುವ ಒಂಬತ್ತು ಎಕರೆ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಮೆಟ್ರೊ ರೈಲು ನಿಲ್ದಾಣ, ಬಿಎಂಟಿಸಿ ಬಸ್‌ ಡಿಪೊ, ಉಪನಗರ ರೈಲು ನಿಲ್ದಾಣ, ವಿಮಾನ ನಿಲ್ದಾಣಕ್ಕೆ ಎತ್ತರಿಸಿದ ರಸ್ತೆ ಎಲ್ಲವೂ ಈ ಪ್ರದೇಶದಲ್ಲೇ ನಿರ್ಮಾಣವಾಗಬೇಕಿತ್ತು. ಆದರೆ ರಾಜ್ಯ ಸರ್ಕಾರ ಅಗತ್ಯ ಭೂಮಿಯನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘2000ದಲ್ಲಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಆದರೆ ಈವರೆಗೂ ಯಾವುದೇ ಅಭಿವೃದ್ಧಿ ಚಟುವಟಿಕೆಗಳಾಗಿಲ್ಲ. ಈಗ 46 ಎಕರೆ ತನ್ನ ಬಳಿ ಉಳಿಸಿಕೊಂಡು, 9 ಎಕರೆಯನ್ನಷ್ಟೇ ಬಿಎಂಆರ್‌ಸಿಎಲ್‌ಗೆ ನೀಡಿದೆ’ ಎಂದರು.

ADVERTISEMENT

‘ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜತೆಗೆ ಸರ್ಕಾರ ಒ‍ಪ್ಪಂದ ಮಾಡಿಕೊಂಡಿದೆಯೇ? ಯಾವ ಉದ್ದೇಶಕ್ಕೆ ಸರ್ಕಾರ ತನ್ನ ಬಳಿ ಅಪಾರ ಪ್ರಮಾಣದ ಭೂಮಿ ಉಳಿಸಿಕೊಂಡಿದೆ’ ಎಂದು ಪ್ರಶ್ನಿಸಿದರು.

‘ಅಕ್ರಮ ವಲಸಿಗರನ್ನು ಓಡಿಸಿ’

‘ಹಲವು ವರ್ಷಗಳಿಂದ ಈ ಜಾಗ ಖಾಲಿ ಇರುವ ಕಾರಣ ಬಾಂಗ್ಲಾದೇಶದ ಅಕ್ರಮ ವಲಸಿಗರು ಇಲ್ಲಿ ಬಂದು ನೆಲೆಸಿದ್ದಾರೆ. ಸರ್ಕಾರ ಕೂಡಲೇ ತನಿಖೆ ನಡೆಸಿ ಅವರನ್ನು ಹೊರಗಟ್ಟುವ ಕೆಲಸ ಮಾಡಬೇಕು’ ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಹೆಬ್ಬಾಳ–ಹೆಮ್ಮನಕೆರೆಯ ಖಾಲಿ ಪ್ರದೇಶದಲ್ಲಿ ಇರುವ ಗುಜರಿ ಮತ್ತು ಕೊಳೆಗೇರಿಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ನಿವಾಸಿಗಳ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ‘ರೋಹಿಂಗ್ಯಾಗಳು ದೇಶದ್ರೋಹದ ಕೆಲಸ ಮಾಡುವವರು ಇಲ್ಲಿ ನೆಲಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಕೆಲಸ ಕೂಡಲೇ ಆಗಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.