ADVERTISEMENT

ಎಚ್‌.ಎ.ಎಲ್‌ ನೌಕರರ ಜೊತೆ ಸಭೆ ಯಾವ ಪುರುಷಾರ್ಥಕ್ಕೆ: ರಾಹುಲ್‌ಗೆ ಶೋಭಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:52 IST
Last Updated 13 ಅಕ್ಟೋಬರ್ 2018, 12:52 IST
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)   

ಬೆಂಗಳೂರು:‘ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್ಎಎಲ್) ನೌಕರರ ಜೊತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯಾವ ಪುರುಷಾರ್ಥಕ್ಕಾಗಿ ಸಭೆ ಮಾಡುತ್ತಿದ್ದಾರೆ. ಅವರಿಗೆ ಏನು ಅಧಿಕಾರ ಇದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'ಎಚ್‌ಎಎಲ್‌ ಅಧಿಕಾರಿಗಳ ಜೊತೆ ಸಭೆ ನಡೆಸಲು ರಾಹುಲ್‌ ಅವರೇನು ಪ್ರಧಾನಿಯೇ, ರಕ್ಷಣಾ ಸಚಿವರೇ ಅಥವಾ ಹಣಕಾಸು ಸಚಿವರೇ’ ಎಂದರು.

‘ಸಭೆಯಲ್ಲಿ ಭಾಗವಹಿಸಲು ಎಚ್.ಎ.ಎಲ್ ಸಿಬ್ಬಂದಿ ನಿರಾಕರಿಸಿದ್ದಾರೆ. ಹಾಗಾದರೆ ನೀವು ಸಭೆ ನಡೆಸುತ್ತಿರುವುದು ಯಾರ ಜೊತೆ. ಮಿನ್ಕ್ಸ್‌ ವೃತ್ತದಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಸ್ಥಳದಲ್ಲಿ ಸಭೆ ಮಾಡಲು ಹೇಗೆ ಸಾಧ್ಯ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು' ಎಂದು ರಾಹುಲ್‌ ಅವರನ್ನು ಉದ್ದೇಶಿಸಿ ಪ್ರಶ್ನೆ ಮಾಡಿದರು.

ADVERTISEMENT

’ಹೋದಲ್ಲೆಲ್ಲ ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಒಂದೊಂದು ಸುಳ್ಳು ಮಾಹಿತಿ ಕೊಡುವ ಮೂಲಕರಾಹುಲ್ ಗಾಂಧಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮಾತ್ಸರ್ಯದ ರಾಜಕಾರಣದ ಮೂಲಕ ರಕ್ಷಣಾ ಇಲಾಖೆಯ ಹಾಗೂ ಸೈನಿಕರ ಮನೊಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

‘ಎಚ್‌ಎಎಲ್‌ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ರಾಹುಲ್‌ ಹೇಳಿದ್ದಾರೆ. ಒಬ್ಬ ಸಂಸದರಾಗಿ ಎಚ್‌ಎಎಲ್‌ ಬಗ್ಗೆ ತಿಳಿದುಕೊಳ್ಳದಿರುವುದೇ ಅವರೇನು ಎಂಬುದನ್ನು ತೋರಿಸುತ್ತದೆ’ ಎಂದರು.

'ಕಾಂಗ್ರೆಸ್ ಪಕ್ಷ 50 ವರ್ಷಕ್ಕೂ ಅಧಿಕ ಕಾಲ ದೇಶವನ್ನು ಆಳಿದ್ದರೂ ರಕ್ಷಣಾ ಇಲಾಖೆಗೆ ಅಗತ್ಯವಿರುವ ಯುದ್ಧ ಸಾಮಗ್ರಿ ಖರೀದಿಸಿಲ್ಲ. ಗಡಿ ಕಾಯುವ ಸೈನಿಕರು ರಾತ್ರಿ ವೇಳೆ ಧರಿಸುವ ಕನ್ನಡಕವನ್ನೂ ಒದಗಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

'ವಿಧಾನಾಸೌಧದ ಮುಂದೆ ಆರಂಭವಾದ ಮಹಾಘಟಬಂಧನ ಬಿಎಸ್ಪಿ ಶಾಸಕ ಎನ್. ಮಹೇಶ್ ಸಚಿವ ಸಂಪುಟಕ್ಕೆ ರಾಜಿನಾಮೆ ನೀಡುವುದರೊಂದಿಗೆ ವಿಧಾನಸೌಧದಲ್ಲೆ ಅಂತ್ಯ ಕಂಡಿದೆ. ಕಾಂಗ್ರೆಸ್ ಜೊತೆ ಕೈ ಜೋಡಿಸಲು ದೇಶದಲ್ಲಿ ಯಾವ ಪಕ್ಷವೂ ಸಿದ್ಧವಿಲ್ಲ’ ಎಂದರು.

'ರಾಜ್ಯದಲ್ಲಿ ಅತಿವೃಷ್ಟಿ ಇದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಬಗ್ಗೆ ಮಾತನಾಡುವ ಬದಲು ದೇವಸ್ಥಾನ ಸುತ್ತುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮೈತ್ರಿಕೂಟದ ಶಾಸಕರು ಬಂಡಾಯ ಏಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಕರೆ ನೀಡುತ್ತಾರೆ. ಅವರ ಪಕ್ಷದ ಶಾಸಕರೊಬ್ಬರು ಅಣೆಕಟ್ಟಿಗೆ ಡೈನಮೈಟ್‌ ಇಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಆದರೂ ಅವರನ್ನು ಇದುವರೆಗೆ ಬಂಧಿಸಿಲ್ಲ. ರಾಜ್ಯದಲ್ಲಿ ಏನು ನಡೆಯುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.

'ದಲೈಲಾಮಾ ಅವರನ್ನು ಕೊಲ್ಲಲು ಬಂದ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ರಾಮನಗರದಲ್ಲಿ ಬಂಧಿಸಿದೆ. ನಿರ್ದಿಷ್ಟ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ, ‘ಬಂಧಿತರು ದಲೈಲಾಮಾ ಅವರನ್ನು ಕೊಲ್ಲಲು ಬಂದಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರು ತನಿಖಾಧಿಕಾರಿ ಆಗಿದ್ದು ಯಾವಾಗ. ಸ್ವಂತ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲವೇ' ಎಂದು ಪ್ರಶ್ನಿಸಿದರು.

‘ಮಹಿಳಾ ದೌರ್ಜನ್ಯ ನಡೆದರೆ ಶಿಕ್ಷಿಸಲು ಕಾನೂನಿದೆ’

‘ಮೀ–ಟೂ’ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ, ‘ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಶಿಕ್ಷಿಸಲು ಕಾನೂನು ಇದೆ. ಅದರ ಅಡಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿದೆ. ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಇರುವ ವೇದಿಕೆಯನ್ನೇ ಬಳಸಿಕೊಂಡು ನ್ಯಾಯ ಪಡೆಯಬೇಕು’ ಎಂದರು.

ಕೇಂದ್ರ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿರುವ ಕುರಿತು, ‘ಈ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಲೈಂಗಿಕ ಕಿರುಕುಳ ಯಾರೇ ನೀಡಿದ್ದರೂ ಈ ಬಗ್ಗೆ ತನಿಖೆ ಆಗಬೇಕು. ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಮಾಡಿ ಶಿಕ್ಷಿಸಬೇಕು’ ಎಂದರು.

‘ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ಒಂದು ಸುತ್ತೋಲೆ ಹೊರಡಿಸಿತ್ತು. ಆಗ ಅದನ್ನು ನಾನೇ ವಿರೋಧಿಸಿದ್ದೆ. ಈ ಸುತ್ತೋಲೆಯನ್ನು ಜಾರಿಗೊಳಿಸಿದರೆ, ಮಹಿಳಾ ದೌರ್ಜನ್ಯ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಪೊಲೀಸರು ಹಿಂದೇಟು ಹಾಕುತ್ತಾರೆ’ ಎಂದರು.

‘ಸಿಧು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’

ಪಂಜಾಬ್‌ನ ಸಚಿವನವಜ್ಯೋತ್‌ ಸಿಧು ಅವರು ಪಾಕಿಸ್ತಾನವನ್ನು ದಕ್ಷಿಣ ಭಾರತಕ್ಕೆ ಹೋಲಿಸಿರುವ ಕುರಿತು ಪ್ರತಿಕ್ರಿಯಿಸಿದ ಶೋಭಾ, ‘ಅವರು ಇಲ್ಲಿ ಕ್ರಿಕೆಟ್‌ ಆಡಿ ಹಣ ಮಾಡುವಾಗ ದಕ್ಷಿಣ ಭಾರತ ಚೆನ್ನಾಗಿ ಕಂಡಿತ್ತು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತದೆ’ ಎಂದರು.

* ಎಚ್‌ಎಎಲ್‌ ಕುರಿತು ಅಪಪ್ರಚಾರ ಮಾಡುವ ಬದಲು ಮಹಾಘಟಬಂಧನದ ವೈಫಲ್ಯದ ಬಗ್ಗೆ ರಾಹುಲ್‌ ಗಾಂಧಿ ಚರ್ಚಿಸುವುದು ಒಳಿತು
–ಶೋಭಾ ಕರಂದ್ಲಾಜೆ,ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.