ADVERTISEMENT

ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:30 IST
Last Updated 23 ಡಿಸೆಂಬರ್ 2025, 6:30 IST
   

ಬೀದರ್‌: ‘ರಾಜ್ಯದ ಕಾಂಗ್ರೆಸ್‌ ಸರ್ಕಾರವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರುವುದರ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಕಾಂಗ್ರೆಸ್‌ ವಿರುದ್ಧ ಯಾರೂ ಮಾತನಾಡಬಾರದು. ಸೋಷಿಯಲ್‌ ಮೀಡಿಯಾದಲ್ಲಿ ಬರೆಯಬಾರದು. ಇದು ಅವರ ವ್ಯವಸ್ಥಿತ ಷಡ್ಯಂತ್ರ. ಕಾಂಗ್ರೆಸ್‌ ಸರ್ಕಾರ ಎಲ್ಲದರಲ್ಲೂ ವಿಫಲವಾಗಿದೆ. ಕುರ್ಚಿ ಕಾದಾಟದಲ್ಲಿ ನಿರತರಾಗಿದ್ದಾರೆ. ವಿಷಯವನ್ನು ವಿಷಯಾಂತರ ಮಾಡಲು ಹಲವಾರು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ಕೂಡ ಒಂದು. ರಾಜ್ಯದ ಜನರ ಗಮನ ಬೇರೆ ಕಡೆ ತಿರುಗಿಸಲು ನಡೆಸುತ್ತಿರುವ ಷಡ್ಯಂತ್ರ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಎಲ್ಲರೂ ಮುಖ್ಯಮಂತ್ರಿಗಳಾಗಬೇಕು, ಕೆಪಿಸಿಸಿ ಅಧ್ಯಕ್ಷರಾಗಬೇಕು. ಎಲ್ಲರಿಗೂ ಅಧಿಕಾರ ಬೇಕು. ಯಾರನ್ನೂ ಉಳಿಸಬೇಕು, ಯಾರನ್ನೂ ಇಳಿಸಬೇಕು, ಯಾರು ಕುರ್ಚಿ ಏರಬೇಕೆಂಬ ಚರ್ಚೆ ಕರ್ನಾಟಕದಲ್ಲಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನ ಯಾವ ಪುರುಷಾರ್ಥಕ್ಕಾಗಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಅಲ್ಲಿ ದ್ವೇಷ ಭಾಷಣ ತಡೆ ಕಾಯ್ದೆ ತಂದರು ಎಂದರು.

ADVERTISEMENT

ಉತ್ತರ ಕರ್ನಾಟಕಕ್ಕೂ ನ್ಯಾಯ ಕೊಡಲ್ಲ, ಕರ್ನಾಟಕಕ್ಕೂ ನ್ಯಾಯ ಕೊಡಲ್ಲ, ಬೆಂಗಳೂರಿಗೂ ನ್ಯಾಯ ಕೊಡಲ್ಲ. ಯಾರಿಗೂ ನೀವು ನ್ಯಾಯ ಕೊಡಲ್ಲ. ಬರೀ ಕುರ್ಚಿಯ ಚರ್ಚೆ ನಡೆಸುತ್ತಿದ್ದಾರೆ. ಡಾ.ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ ಸಿಎಂ ಆಗಲು ಪ್ರಯತ್ನಿಸುತ್ತಿದ್ದರೆ, ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಬೇಕಾ? ಸಿದ್ದರಾಮಯ್ಯನವರು ಉಳಿಬೇಕಾ ಎಂಬ ಚರ್ಚೆ ನಡೀತಿದೆ. ಪ್ರತಿ ನಿತ್ಯ ಕುರ್ಚಿ ಕಾದಾಟ ಬಿಟ್ಟರೆ ಅಭಿವೃದ್ಧಿಯ ಚರ್ಚೆಯೇ ಆಗುತ್ತಿಲ್ಲ ಎಂದು ಟೀಕಿಸಿದರು.

ರಾಹುಲ್‌ ಗಾಂಧಿ ಭಾರತದ ವಿರೋಧ ಪಕ್ಷದ ನಾಯಕರು:

ರಾಹುಲ್‌ ಗಾಂಧಿ ಅವರು ಅಧಿವೇಶನದಲ್ಲಿ ಸಂದರ್ಭದಲ್ಲಿ ವಿದೇಶಗಳಿಗೆ ಭೇಟಿ ಕೊಡುತ್ತಾರೆ. ವಿದೇಶದಲ್ಲಿ ಭಾರತವನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದ ಸುಧಾರಣೆ ನಮ್ಮ ದೇಶದಲ್ಲಿ, ಸಂಸತ್ತಿನಲ್ಲಿ ಆಗಬೇಕು. ಪಾರ್ಲಿಮೆಂಟ್‌ ಬಿಟ್ಟು ಆ ದೇಶದಲ್ಲಿ ಹೋಗಿ ಮಾತನಾಡಿದರೆ ಅವರು ನಮ್ಮ ದೇಶಕ್ಕೆ ಬಂದು ಸುಧರಣೆ ಮಾಡುತ್ತಾರಾ? ನಮ್ಮ ದೇಶದಲ್ಲಿದ್ದು ಹೋರಾಟ ಮಾಡಬೇಕು, ಮಾತನಾಡಬೇಕು ಎಂದು ಆಗ್ರಹಿಸಿದರು.

ಭಾರತವನ್ನು ಹೀಯಾಳಿಸುವ, ಕೆಟ್ಟದಾಗಿ ಬಿಂಬಿಸುವ ಕೆಲಸ ರಾಹುಲ್‌ ಗಾಂಧಿ ನಿರಂತರವಾಗಿ ಮಾಡುತ್ತಿದ್ದಾರೆ. ರಾಹುಲ್‌ ಸಂಸತ್ತಿಗೆ ವಿರೋಧ ಪಕ್ಷದ ನಾಯಕರಾಗಬೇಕಿತ್ತು. ಅವರು ಅವರ ಪಕ್ಷಕ್ಕೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಭಾರತದ ವಿರೋಧ ಪಕ್ಷದ ನಾಯಕರಾಗಿ ಮೂಡಿ ಬರುತ್ತಿದ್ದಾರೆ ಎಂದು ಟೀಕಿಸಿದರು.

ನ್ಯಾಷನಲ್‌ ಹೆರಾಲ್ಡ್‌ ಹಗರಣದಲ್ಲಿ ಭಾವಿ ಮುಖ್ಯಮಂತ್ರಿ ಸಿಕ್ಕಿಕೊಳ್ಳುತ್ತಾರೆ:

ನ್ಯಾಷನಲ್‌ ಹೆರಾಲ್ಡ್‌ ಹಗರಣ ಬಹಳ ದೊಡ್ಡದು. ಹಲವಾರು ಜನ ನಾಯಕರು ಇದರಲ್ಲಿ ಸಿಕ್ಕಿಕೊಳ್ಳುತ್ತಾರೆ. ಕರ್ನಾಟಕದ ಭಾವಿ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವವರು ಕೂಡ ಇದರಲ್ಲಿ ಸಿಕ್ಕಿಕೊಳ್ಳುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು.

ಈ ಹಗರಣದ ಯಾವುದೋ ಒಂದು ವಿಷಯದಲ್ಲಿ ಜಯ ಸಿಕ್ಕಿದೆ ಎಂದರೆ ಭ್ರಷ್ಟಾಚಾರ ಮುಚ್ಚಿ ಹೋಗಿದೆ ಎಂದರ್ಥವಲ್ಲ. ಕಾಂಗ್ರೆಸ್‌ ನಿರಂತರವಾಗಿ ಭೃಷ್ಟಾಚಾರ ಮಾಡುತ್ತಿದೆ. ನಿರಂತರವಾಗಿ ಅದನ್ನು ಪೋಷಿಸುತ್ತಿದೆ. ಇಂದಿಗೂ ಅದೇ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.