ಎಚ್.ಡಿ. ಕುಮಾರಸ್ವಾಮಿ ಹಾಗೂ ಎನ್. ಚಲುವರಾಯಸ್ವಾಮಿ
ಮಂಡ್ಯ: ‘ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿ ಹೊರ ರಾಜ್ಯದವರಂತೆ ಕರ್ನಾಟಕ ಸರ್ಕಾರ ತಮ್ಮನ್ನು ಬಳಸಿ ಕೊಳ್ಳುತ್ತಿಲ್ಲವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ. ನಾನು ಅರ್ಜಿ ಹಿಡಿದು ಅವರ ಮನೆ ಬಳಿ ನಿಲ್ಲಬೇಕೇ? ರಾಜ್ಯದ ಜನ ಅವರನ್ನು ಗೆಲ್ಲಿಸಿಲ್ಲವೇ’ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ‘ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲವಿಲ್ಲವೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಇರುವುದಿಲ್ಲ. ಹಾಗಾಗಿ ಅವರ ರಾಜ್ಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ರಾಜಕೀಯ ಪ್ರೇರಿತ. ಲೋಕಾಯುಕ್ತ ತನಿಖೆ ಮಾಡುತ್ತಿದೆ. ನ್ಯಾಯ ಕೊಟ್ಟ ನ್ಯಾಯಾಲಯಕ್ಕೆ ಧನ್ಯವಾದ’ ಎಂದರು.
‘ರಾಜ್ಯ ಸರ್ಕಾರದ ಎಲ್ಲ ನಿರ್ಧಾರಗಳನ್ನೂ ರಾಜ್ಯಪಾಲರು ನಿರಾಕರಿಸುತ್ತಾರೆ. ಅನೇಕ ವಿಚಾರಗಳಿಗೆ ಅಂಕಿತ ಹಾಕದೆ ವರ್ಷಗಟ್ಟಲೇ ಬಾಕಿ ಉಳಿದಿದೆ. ಆದರೆ, ಎಲ್ಲದ್ದಕ್ಕೂ ಮೊದಲು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು’ ಎಂದು ದೂರಿದರು.
‘ಮೈಕ್ರೊಫೈನಾನ್ಸ್ ಕಂಪನಿಗಳ ಕಿರುಕುಳದ ಕುರಿತು ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ನ್ಯಾಯ ಕೊಡಬೇಕು. ಆದರೆ ಬಿಜೆಪಿ ವಕ್ತಾರರಾಗಿ ಮಾಡುತ್ತಿದ್ದಾರೆ. ಹೀಗೇ ಆದರೆ ಕಿರುಕುಳಕ್ಕೆ ಬೇಸತ್ತವರೆಲ್ಲರೂ ಪ್ರತಿಭಟಿಸುವ ಕಾಲ ಬರುತ್ತದೆ’ ಎಂದರು.
‘ಆರ್.ಅಶೋಕ ಅವರು ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಅವರ ಹೇಳಿಕೆಗೆ ಪ್ರತಿಕ್ರಿಯಿಸಲಾರೆ. ಅವರು ಆತ್ಮೀಯರು, ಆದರೆ ಪಾಪದ ಮನುಷ್ಯ. ಪಕ್ಷ ಕೊಟ್ಟಿರುವ ಸ್ಥಾನ ಉಳಿಸಿಕೊಳ್ಳಲು ಮಾತನಾಡುತ್ತಾರೆ. ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸದಿದ್ದರೆ ಅವರನ್ನೇ ಬದಲಾಯಿಸಿಬಿಡುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಎಚ್.ಡಿ.ದೇವೇಗೌಡರ ಕುಟುಂಬ ಬಿಟ್ಟರೆ ಬೇರೆ ಯಾರೂ ಪ್ರಾಮಾಣಿಕರಲ್ಲ. ಈಗ ಕಾಂಗ್ರೆಸ್‌ನವರು ಮಾತ್ರ ಭ್ರಷ್ಟರು, ಬಿಜೆಪಿಯನ್ನು ಒಪ್ಪುತ್ತಾರೆ ಎಂದೆನ್ನಿಸು ತ್ತದೆ. ದೇವೇಗೌಡರಿಗೆ ಇನ್ನೂ ಹತ್ತಾರು ವರ್ಷ ಆಯಸ್ಸು ಸಿಗಲಿ. ನಮ್ಮನ್ನು ಹೀಗೇ ಟೀಕಿಸುತ್ತಿರಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.