ADVERTISEMENT

ಸಮ್ಮಿಶ್ರ ಸರ್ಕಾರ ಬದುಕಿದೆ ಎಂಬುದನ್ನು ತೋರಿಸಿ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 6:18 IST
Last Updated 11 ನವೆಂಬರ್ 2018, 6:18 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಕಲಬುರ್ಗಿ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬದುಕಿದೆಯೋ ಇಲ್ಲವೋ ಎಂಬುದನ್ನು ತೋರಿಸಬೇಕು ಮತ್ತು ಬರ ಪರಿಹಾ ಕಾಮಗಾರಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘100ಕ್ಕೂ ಅಧಿಕ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಆದರೆ, ಇದುವರೆಗೂ ಬರ ಪರಿಹಾರ ಕಾಮಗಾರಿ ಆರಂಭಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದರು.

‘ಕಳಸಾ ಬಂಡೂರಿ ವಿವಾದಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಿಂದೆಂದೂ ಯಾವ ಸರ್ಕಾರಗಳಿಗೂ ಈ ರೀತಿ ಛೀಮಾರಿ ಹಾಕಿರಲಿಲ್ಲ’ ಎಂದು ಹರಿಹಾಯ್ದರು.

ಟಿಪ್ಪು ಜಯಂತಿಯಿಂದ ಅಂತರ:‘ಈ ಹಿಂದೆ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಿದ್ದ ಜೆಡಿಎಸ್ ಈ ಬಾರಿ ಎಲ್ಲಿಯೂ ಟಿಪ್ಪು ಜಯಂತಿ ಆಚರಿಸಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟಿಪ್ಪುವನ್ನು ನಂಬಿದ್ದ ವಿಜಯ ಮಲ್ಯ ಹಾಳಾಗಿ ಹೋಗಿದ್ದಾನೆ. ಟಿಪ್ಪು ಜಯಂತಿ ಜಾರಿಗೆ ತಂದ ಮೂಲಪುರುಷ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ, ಚಾಮುಂಡೇಶ್ವರಿಯಲ್ಲೂ ಸೋಲು ಅನುಭವಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಕೆ.ಜೆ.ಜಾರ್ಜ್, ಸಾ.ರಾ.ಮಹೇಶ್ ಸೇರಿದಂತೆ ಹಲವರು ಜಯಂತಿಯಿಂದ ಅಂತರ ಕಾಯ್ದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಅತಿಯಾದ ವಿಶ್ವಾಸ ಮತ್ತು ಸಂಘಟನೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.