ADVERTISEMENT

ಸಿದ್ದರಾಮಯ್ಯಗೆ ಮೇಲು‘ಕೈ‘

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 18:41 IST
Last Updated 9 ಅಕ್ಟೋಬರ್ 2019, 18:41 IST
   

ಬೆಂಗಳೂರು: ಮೂಲ ಕಾಂಗ್ರೆಸಿಗರು ಹಾಗೂ ಪಕ್ಷದ ಹಿರೀಕರ ಕಡು ವಿರೋಧದ ಮಧ್ಯೆಯೂ ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದಂತಾಗಿದೆ.

ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಾಗಲಕೋಟೆ ಜಿಲ್ಲೆಯ ಎಸ್.ಆರ್. ಪಾಟೀಲರನ್ನು ಆಯ್ಕೆ ಮಾಡುವ ಮೂಲಕ ಉತ್ತರ ಕರ್ನಾಟಕಕ್ಕೂ ನ್ಯಾಯ ಕೊಡುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಈ ಹಿಂದೆ ಸಭಾಪತಿ ಸ್ಥಾನ ತಪ್ಪಿಸಿಕೊಂಡಿದ್ದ ಪಾಟೀಲರು, ಸಿದ್ದರಾಮಯ್ಯ ಬಣದಲ್ಲೇ ಗುರುತಿಸಿಕೊಂಡಿದ್ದಾರೆ.

ದೆಹಲಿ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಹಿರಿಯ ಕಾಂಗ್ರೆಸಿಗರು ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ಸ್ಥಾನ ನೀಡದಂತೆ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲು ಮಾಡುವಂತೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ನಡೆಯ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಬಿರುಸುಗೊಂಡಿತ್ತು. ಅಲ್ಲದೇ, ಕಾಂಗ್ರೆಸ್‌ನ ಆಂತರಿಕ ಸಂಘರ್ಷ ಬೀದಿಗೆ ಬಂದಿತ್ತು.

ADVERTISEMENT

ಈ ಬೆಳವಣಿಗೆಗಳ ಬೆನ್ನಲ್ಲೇ, ಹಿಂದೊಮ್ಮೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಮಧುಸೂದನ ಮಿಸ್ತ್ರಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಿದ್ದರು. ಮಿಸ್ತ್ರಿ ನೀಡಿರುವ ವರದಿ ಆಧರಿಸಿ, ಈ ನೇಮಕ ನಡೆದಿದೆ ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವುದಕ್ಕೆ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ‘ಅವರ ಏಕಚಕ್ರಾಧಿಪತ್ಯವನ್ನು ಅಂತ್ಯಗೊಳಿಸಬೇಕು. ಅವರ ನೇತೃತ್ವದಲ್ಲಿ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಮೈತ್ರಿ ಸರ್ಕಾರ ಪತನಗೊಂಡಿದೆ. ಹಾಗಾಗಿಪಕ್ಷದ ಹಿರಿಯ ನಾಯಕರಿಗೆ ಅವಕಾಶ ನೀಡಬೇಕು. ಸಾಮೂಹಿಕ ನಾಯಕತ್ವಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಹಿರಿಯ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು.

ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಸ್ಫೋಟಗೊಂಡಿತ್ತು. ಹಿರಿಯರಾದ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಇತರರು ಅವರ ಮೇಲೆ ಮುಗಿಬಿದ್ದಿದ್ದರು.

ನಂತರ ದೆಹಲಿಗೆ ತೆರಳಿದ್ದ ಹಿರಿಯ ಮುಖಂಡರು ಸಿದ್ದರಾಮಯ್ಯ ವಿರುದ್ಧ ದೂರು ಹೇಳಿದ್ದರು. ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬಾರದು. ಮಹಾರಾಷ್ಟ್ರ ಮಾದರಿ ಅನುಸರಿಸಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸೀಮಿತಗೊಳಿಸಬೇಕು.ಎಚ್.ಕೆ.ಪಾಟೀಲ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಬೇಕು ಎಂದು ಹೈಕಮಾಂಡ್ಬಳಿ ಒತ್ತಡ ಹಾಕಿದ್ದರು.

ಈಚೆಗೆ ದೆಹಲಿಗೆ ತೆರಳಿದ್ದ ಎಚ್.ಕೆ.ಪಾಟೀಲರು ರಾಜ್ಯ ರಾಜಕಾರಣ, ಮೂಲ ಕಾಂಗ್ರೆಸಿಗರ ಕಡೆಗಣನೆಯಾಗುತ್ತಿರುವ ಬಗ್ಗೆ ದೂರು ಹೇಳಿದ್ದರಲ್ಲದೇ, ತಮಗೆ ಅವಕಾಶ ಕೊಡುವಂತೆ ಬೇಡಿಕೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.