ADVERTISEMENT

ಮೋದಿ ಜಪದಿಂದ ಸಿಕ್ಕಿದ್ದೇನು: ಸಿದ್ದರಾಮಯ್ಯ ಪ್ರಶ್ನೆ

ಯುವಜನರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:54 IST
Last Updated 1 ಡಿಸೆಂಬರ್ 2019, 19:54 IST
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಭಾನುವಾರ ಪ್ರಚಾರ ನಡೆಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಲಸೂರಿನಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದಾರೆ
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಭಾನುವಾರ ಪ್ರಚಾರ ನಡೆಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಲಸೂರಿನಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದ್ದಾರೆ   

ಕೆ.ಆರ್.ಪುರ: ‘ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಾಟ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಯುವಜನರಿಗೆ ಇಂತಹ ಪ್ರಧಾನಿ ಬೇಕೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರವಾಗಿ ಭಾನುವಾರ ಪ್ರಚಾರ ನಡೆಸಿ ಮಾತನಾಡಿದರು.

‘ಯುವಕರು ಮೋದಿ, ಮೋದಿ ಎಂದು ಜಪಮಾಡಿದರು. ಆದರೆ ಅವರು ತಿರುಪತಿ ನಾಮ ಹಾಕಿದ್ದಾರೆ. ಪ್ರಧಾನಿಯಿಂದ ಯುವಕರಿಗೆ ಯಾವ ಪ್ರಯೋಜನ ಆಗಲಿಲ್ಲ. ದೇಶದ ಜಿಡಿಪಿ ತೀವ್ರವಾಗಿ ಕುಸಿದಿದೆ. ಆರ್ಥಿಕ ಸ್ಥಿತಿ ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತ ಕೆಳಮಟ್ಟಕ್ಕೆ ಇಳಿದಿದೆ. ಯುವಜನರಿಗೆ ಉದ್ಯೋಗ ಸಿಗದಾಗಿದೆ’ ಎಂದರು.

ADVERTISEMENT

ಸಾಧನೆ: ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಹಾಲು, ಇಂದಿರಾ ಕ್ಯಾಂಟಿನ್ ಆರಂಭ, ಹಾಲಿಗೆ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಿದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. ಬಿಪಿಎಲ್‌ನ ಪ್ರತಿ ಕುಟುಂಬಕ್ಕೆ ನೀಡುತ್ತಿರುವ ಅಕ್ಕಿಯನ್ನು 7 ಕೆ.ಜಿ.ಯಿಂದ 10 ಕೆ.ಜಿ.ಗೆ ಹೆಚ್ಚಳ ಮಾಡಲಾಗುವುದು ಎಂದರು.

ಬೆದರಿಕೆಗೆ ಜಗ್ಗಲ್ಲ: ‘ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷಾಂತರಿಗಳನ್ನು ಸೋಲಿಸಿ, ಸರಿಯಾದ ಪಾಠ ಕಲಿಸಬೇಕು. ಕೆ.ಆರ್.ಪುರ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ. ಇಂತಹ ಬೆದರಿಕೆಗಳಿಗೆ ಜಗ್ಗದೆ ಸರಿಯಾದ ಉತ್ತರ ನೀಡಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟಿದ್ದ ₹2 ಸಾವಿರ ಕೋಟಿ ಅನುದಾನದಲ್ಲೇ ಮಾಡಿರುವ ಲೂಟಿ ಹಾಗೂ ಬಿಜೆಪಿಯವರು ಕೊಟ್ಟಿರುವ ಕೋಟ್ಯಂತರ ರೂಪಾಯಿ ಹಣವನ್ನೇ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಟಿಕೆಟ್ ಕೊಡಿಸಿದೆ: ‘ಕೆ.ಆರ್.ಪುರ ಕ್ಷೇತ್ರದಲ್ಲಿ ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಬಸವರಾಜ್‌ಗೆ ಟಿಕೆಟ್ ಕೊಡಿಸದಿದ್ದರೆ ಅವರು ಜೀವನದಲ್ಲಿಯೇ ಶಾಸಕರಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಟೀಕಿಸಿದರು.

ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ, ಅಧಿಕಾರ ಅನುಭವಿಸಿ, ಲೂಟಿ ಹೊಡೆದರು. ಈಗ ಬಿಜೆಪಿ ಸೇರಿಕೊಂಡು ಆಯ್ಕೆ ಮಾಡಿದ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಟೀಕಿಸಿದರು.

ಪ್ರಚಾರ: ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡಲಾಯಿತು. ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ನಜೀರ್ ಅಹಮದ್, ಜಮೀರ್ ಅಹಮದ್ ಖಾನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.