ADVERTISEMENT

ಕೆಪಿಎಸ್‌ಸಿ ಏನೋ ಬಚ್ಚಿಡಲು ಯತ್ನಿಸುತ್ತಿರುವ ಅನುಮಾನ ಬರುತ್ತಿದೆ: ಸಿದ್ದರಾಮಯ್ಯ

2015ರ ಗೆಜೆಟೆಡ್‌ ಪ್ರೊಬೆಷನರಿ ಪರೀಕ್ಷೆ ಉತ್ತರ ಪತ್ರಿಕೆ ದೃಢೀಕೃತ ಪ್ರತಿ ನೀಡದ ಕೆಪಿಎಸ್‌ಸಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 13:26 IST
Last Updated 19 ಜುಲೈ 2020, 13:26 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: 2015ರ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ದೃಢೀಕೃತ ಪ್ರತಿ ನೀಡದೇ ಸತಾಯಿಸುತ್ತಿರುವುದನ್ನು ನೋಡಿದರೆ, ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ) ಏನನ್ನೋ ಬಚ್ಚಿಡುವ ಪ್ರಯತ್ನ ಮಾಡಿದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಭಾನುವಾರ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ’2015ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ ಉತ್ತರ ಪತ್ರಿಕೆಗಳ ದೃಡೀಕೃತ ಪ್ರತಿಯನ್ನು ನೀಡಲು ನಿರಾಕರಿಸುತ್ತಿರುವುದು ಸರಿಯಲ್ಲ. ಇದರಿಂದಾಗಿ ಕೆಪಿಎಸ್‌ಸಿ ಏನನ್ನೋ ಬಚ್ಚಿಡಲು ಪ್ರಯತ್ನಿಸುತ್ತಿದೆ ಎಂಬ ಗುಮಾನಿ‌ ಮೂಡಲು ಕಾರಣವಾಗಿದೆ,’ ಎಂದು ಹೇಳಿದ್ದಾರೆ.

‘ಉತ್ತರ ಪತ್ರಿಕೆಯ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗ ಕೂಡಾ ಇಂತಹದ್ದೇ ಆದೇಶ ನೀಡಿದೆ. ಹೀಗಿರುವಾಗ ಕೆಪಿಎಸ್‌ಸಿ ವಿನಾಕಾರಣ ಅಭ್ಯರ್ಥಿಗಳನ್ನು ಸತಾಯಿಸುತ್ತಿರುವುದು ಸರಿ ಅಲ್ಲ. ತಕ್ಷಣ ಅವರಿಗೆ ಉತ್ತರ ಪತ್ರಿಕೆಯ ಪ್ರತಿ ನೀಡಬೇಕು,’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಇದೇ ವಿಚಾರವಾಗಿ ಸಿದ್ದರಾಮಯ್ಯ ಹಿಂದೆಯೂ ಕೆಪಿಎಸ್‌ಸಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.‘ಮೌಲ್ಯಮಾಪನ ಆಗಿರುವ ಉತ್ತರ ಪತ್ರಿಕೆ ಪ್ರತಿ ಪಡೆದುಕೊಳ್ಳುವುದು ಅಭ್ಯರ್ಥಿಗಳ ಹಕ್ಕು’ ಎಂದು ಅವರು ಮುಖ್ಯಮಂತ್ರಿಗೇ ಪತ್ರ ಬರೆದಿದ್ದರು.

ಉತ್ತರ ಪತ್ರಿಕೆಗಳ ಪ್ರತಿ ನೀಡಲು ನಿರಾಕರಿಸುತ್ತಿರುವ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ(ಐಎಎಸ್‌ ಅಧಿಕಾರಿ) ದಿವ್ಯಪ್ರಭು ಅವರಿಗೆ ಮಾಹಿತಿ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.