ADVERTISEMENT

ರಾಜ್ಯಕ್ಕೆ ಅನ್ಯಾಯ ಮಾಡಿ ಮೈಸೂರಿನಲ್ಲಿ ಯೋಗ: ಸಿದ್ದರಾಮಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:52 IST
Last Updated 20 ಜೂನ್ 2022, 19:52 IST
   

ಬೆಂಗಳೂರು: ‘2019 ಮತ್ತು ನಂತರದ ಎರಡು ವರ್ಷ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂದಿದ್ದಾಗ ಬಾರದ ಪ್ರಧಾನಿ ನರೇಂದ್ರ ಮೋದಿಗೆ ಈಗ ರಾಜ್ಯದ ನೆನಪಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮೋದಿ ಅವರಿಂದ ರಾಜ್ಯಕ್ಕೆ ಯಾವೆಲ್ಲಾ ಅನ್ಯಾಯ ಆಗಿದೆ, ಜನದ್ರೋಹ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ.ಇಷ್ಟೆಲ್ಲ ಅನ್ಯಾಯ ಮಾಡಿ ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ’ ಎಂದರು.

‘ಮೈಸೂರು ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌ನ್ನು ಬೇರೆ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿದ್ದು ಯಾರು? ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನವಾದ ನಂತರ ಅವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯೇ? ಇದು ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ’ ಎಂದರು.

ADVERTISEMENT

‘ಕೋವಿಡ್‌ ಬಂದಾಗ ಆಮ್ಲಜನಕ ಸಿಗದೆ ರಾಜ್ಯದಲ್ಲಿ ಬಹಳ ಮಂದಿ ಸಾಯಲು ನರೇಂದ್ರ ಮೋದಿ ಕಾರಣರಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ಮೋದಿ ಪ್ರಧಾನಿಯಾದ ಬಳಿಕ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್‌ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ₹ 19 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರಲ್ಲಿ ಶೇ 42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ ₹ 8 ಲಕ್ಷ ಕೋಟಿ ಹಂಚಿಕೆ ಆಗಬೇಕಿತ್ತು. ₹ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ.
ಇನ್ನೂ ₹ 11 ಲಕ್ಷ ಕೋಟಿ ಉಳಿದಿದ್ದು, ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹೀರಾತಿನಲ್ಲಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯಕ್ಕೆ ₹ 5,495 ಕೋಟಿ ವಿಶೇಷ ಅನುದಾನ ನೀಡಬೇಕೆಂದುಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಿತ್ತು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅದನ್ನು ತಿರಸ್ಕರಿಸಿದ್ದರಿಂದ ನಮಗೆ ಸಿಗಲಿಲ್ಲ. ಇದಕ್ಕೆ ಕಾರಣ ಮೋದಿ ಸರ್ಕಾರವಲ್ಲವೇ’ ಎಂದೂ ಪ್ರಶ್ನಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆಲ್ಲ ಪರವಾನಗಿ ಕೊಟ್ಟವರಂತೆ ಮೋದಿ ಸುಮ್ಮನಿದ್ದರೆ ಹೇಗೆ? ಅವರು ನಮ್ಮ ರಾಜ್ಯಕ್ಕೆ ಬರಬಾರದು ಎಂದು ಹೇಳಲ್ಲ. ಆದರೆ, ‌ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಷ್ಟೇ ಕೇಳುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.