ADVERTISEMENT

ಬಜೆಟ್‌ನಲ್ಲಿ ದಮನಿತ ವರ್ಗ ನಿರ್ಲಕ್ಷಿಸಿದರೆ ಹೋರಾಟ– ಸಿದ್ದರಾಮಯ್ಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 16:36 IST
Last Updated 28 ಫೆಬ್ರುವರಿ 2022, 16:36 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘2022–23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ನ್ಯಾಯಯುತ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದಮನಿತ ವರ್ಗಗಳ ಕಲ್ಯಾಣವನ್ನು ಈ ಬಜೆಟ್‍ನಲ್ಲಿಯೂ ನಿರ್ಲಕ್ಷಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಮಾಜದ ಅಂಚಿನಲ್ಲಿರುವ ಜನರ ಕಲ್ಯಾಣ ಸಾಧ್ಯವಾಗದೆ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ, ಕೃಷಿ, ವ್ಯಾಪಾರ, ಮೂಲಸೌಕರ್ಯ ಮುಂತಾದ ಯೋಜನೆಗಳಿಗೆ ನ್ಯಾಯಯುತವಾಗಿ ಅನುದಾನ ಒದಗಿಸಬೇಕು. ಈ ವರ್ಗಗಳಿಗಾಗಿ ಮೀಸಲಿಡುವ ಅನುದಾನವನ್ನು ಇತರ ಯಾವುದೇ ಯೋಜನೆಗಳಿಗೆ ಪರಿವರ್ತಿಸಬಾರದು’ ಎಂದಿದ್ದಾರೆ.

‘2011ರ ಜನಗಣತಿಯಂತೆ ಶೇ 24.1ರಷ್ಟು ಎಸ್‌ಸಿ ಮತ್ತು ಎಸ್‌ಟಿ ಜನರು ರಾಜ್ಯದಲ್ಲಿದ್ದಾರೆ. ಈ ವರ್ಗಗಳ ಕಲ್ಯಾಣಕ್ಕೆ 2013ರಲ್ಲಿ ನಮ್ಮ ಸರ್ಕಾರ ಇದ್ದಾಗ ಕಾಯ್ದೆ ಜಾರಿಗೆ ತಂದೆವು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸಿ, ಅದೇ ವರ್ಷ ಖರ್ಚು ಮಾಡುವ ಶಾಸನಬದ್ಧ ಅನಿವಾರ್ಯತೆಯನ್ನು ಈ ಕಾಯ್ದೆ ಮೂಲಕ ರೂಪಿಸಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಕಾಯ್ದೆಯಲ್ಲಿರುವ ವಿಚಾರಗಳನ್ನು ಕಡೆಗಣಿಸಿದೆ’ ಎಂದಿದ್ದಾರೆ.

ADVERTISEMENT

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಿಗೆ ಬಿಡುಗಡೆ ಮಾಡುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ₹ 5000 ಕೋಟಿಗಳವರೆಗೆ ಅನುದಾನ ಒದಗಿಸುತ್ತಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2020-21 ರಲ್ಲಿ ₹ 3,119 ಕೋಟಿ, 2021-22ರಲ್ಲಿ ₹ 3,762 ಕೋಟಿ ಮಾತ್ರ ಒದಗಿಸಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ₹ 1,650 ಕೋಟಿಗಳವರೆಗೆ ಅನುದಾನ ಒದಗಿಸುತ್ತಿದ್ದೆವು. ಈಗ ₹ 1,350 ಕೋಟಿಗೆ ಇಳಿದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.