ADVERTISEMENT

ತಮಿಳುನಾಡಿನ ವಿಸಿಕೆಯಿಂದ ಸಿದ್ದರಾಮಯ್ಯಗೆ ಅಂಬೇಡ್ಕರ್‌ ಪ್ರಶಸ್ತಿ

ಪಿಟಿಐ
Published 31 ಜುಲೈ 2022, 2:42 IST
Last Updated 31 ಜುಲೈ 2022, 2:42 IST
ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ  ಅಂಬೇಡ್ಕರ್‌ ಪ್ರಶಸ್ತಿ ನೀಡಿದ ತಮಿಳುನಾಡಿನ ‘ವಿಡುದಲೈ ಚಿರುತೈಗಳ್‌ ಕಚ್ಚಿ (ವಿಸಿಕೆ)’ ಸಂಸದ ತಿರುಮಾವಳನ್‌
ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಂಬೇಡ್ಕರ್‌ ಪ್ರಶಸ್ತಿ ನೀಡಿದ ತಮಿಳುನಾಡಿನ ‘ವಿಡುದಲೈ ಚಿರುತೈಗಳ್‌ ಕಚ್ಚಿ (ವಿಸಿಕೆ)’ ಸಂಸದ ತಿರುಮಾವಳನ್‌    

ಚೆನ್ನೈ: ತಮಿಳುನಾಡಿನ ‘ವಿಡುದಲೈ ಚಿರುತೈಗಳ್‌ ಕಚ್ಚಿ (ವಿಸಿಕೆ)’ ಕೊಡಮಾಡುವ ‘ಡಾ. ಬಿ.ಆರ್‌ ಅಂಬೇಡ್ಕರ್ ಸುದರ್ ಪ್ರಶಸ್ತಿ’ಯನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಶನಿವಾರ ಶನಿವಾರ ಸ್ವೀಕರಿಸಿದರು. ‘ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು 'ದ್ವಂದ್ವ' ನಿಲುವು ಅನುಸರಿಸುತ್ತಿದೆ’ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದರಾಮಯ್ಯ ಆರೋಪಿಸಿದರು.

ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿರುವುದನ್ನು ಅವರು ಶ್ಲಾಘಿಸಿದರಾದರೂ, ಸಾಮಾಜಿಕ ನ್ಯಾಯವನ್ನು ಜಾರಿಗೆ ತರಲು ಕೇಂದ್ರವು ಉತ್ಸುಕವಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ಇದಕ್ಕೆ ಅವರು, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಉದಾಹರಣೆಯಾಗಿ ನೀಡಿದರು.

‘ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಅನಂತ್‌ ಕುಮಾರ್‌ ಹೆಗಡೆ ಅವರು ಕಾರ್ಯಕ್ರಮವೊಂದರಲ್ಲಿ ಹಿಂದೆ ಹೇಳಿದ್ದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದೇ ಅನಂತ್‌ ಕುಮಾರ್‌ ಅವರು ಅಂಥ ಹೇಳಿಕೆ ನೀಡಿದ್ದಾರೆ. ಇಲ್ಲವಾಗಿದ್ದಿದ್ದರೆ ಅವರನ್ನು ತಕ್ಷಣವೇ ವಜಾ ಮಾಡಬೇಕಿತ್ತಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ದ್ರೌಪದಿ ಮುರ್ಮು ರಾಷ್ಟ್ರಪತಿ ಆಗಿದ್ದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಆರ್‌ಎಸ್‌ಎಸ್ ತನ್ನ ನಾಯಕರನ್ನು ಮೇಲೆತ್ತುವಲ್ಲಿ ಸಾಮಾಜಿಕ ನ್ಯಾಯವನ್ನು ಅನುಸರಿಸಿದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

‘ಸನಾತನ’ವಾದವನ್ನು ವಿರೋಧಿಸಿ, ಕ್ರಾಂತಿಕಾರಿ ಸಮಾಜ ಸುಧಾರಕ ಬಿ ಆರ್ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದ ಸಿದ್ದರಾಮಯ್ಯ ಅವರ ದಣಿವರಿಯದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ’ ಎಂದು ಸಂಸದ, ವಿಸಿಕೆ ಸಂಸ್ಥಾಪಕ ತೊಳ್ ತಿರುಮಾವಳವನ್ ಹೇಳಿದರು.

‘ತಮ್ಮದೇ ಆದ ಹಿಂದುಳಿದ ವರ್ಗದ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯ ಅವರು, ಹೋರಾಟಗಾರ ರಾಮಮನೋಹರ ಲೋಹಿಯಾ, ಅಂಬೇಡ್ಕರ್ ಮತ್ತು ಸಮಾಜ ಸುಧಾರಕ ಬಸವಣ್ಣ ಅವರ ಸೈದ್ಧಾಂತಿಕ ಬದ್ಧತೆಯನ್ನು ಅನುಸರಿಸುತ್ತಾ, ‘ಸನಾತನ' ತತ್ವಗಳನ್ನು ದೃಢವಾಗಿ ವಿರೋಧಿಸುತ್ತಾ ಬಂದಿದ್ದಾರೆ‘ ಎಂದು ತಿರುಮಾವಳವನ್ ಹೇಳಿದರು.

‘ಜಾತಿ, ಧರ್ಮದ ಆಧಾರದ ಸಾಮಾಜಿಕ ಎಂಜಿನಿಯರಿಂಗ್ ಮಾಡುವ ಸಂಘಪರಿವಾರದ ದ್ವೇಷದ ರಾಜಕಾರಣವನ್ನು ವಿರೋಧಿಸುವಲ್ಲಿ ಸಿದ್ದರಾಮಯ್ಯ ಬದ್ಧತೆ ಪ್ರದರ್ಶಿಸಿದ್ದಾರೆ. ತಮ್ಮ ಅವಿರತ ಪರಿಶ್ರಮದ ಫಲವಾಗಿಯೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು. ಅದರ ಮೂಲಕ ಅವರು ಸಾಮಾಜಿಕ ನ್ಯಾಯದ ರಾಜಕೀಯವನ್ನು ಜನರ ಮುಂದಿಟ್ಟಿದ್ದರು’ ಎಂದು ತಿರುಮಾವಳನ್‌ ಕೊಂಡಾಡಿದರು.

ವಿಸಿಕೆ ನೀಡುವ ಈ ಪ್ರತಿಷ್ಠಿತ ‘ಅಂಬೇಡ್ಕರ್ ಸುದರ್’ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.