ADVERTISEMENT

ನಾವು ರಾಜ್ಯಪಾಲರ ವಿರುದ್ಧವಿಲ್ಲ, ಕೇಂದ್ರದ ವಿರುದ್ಧ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 20:44 IST
Last Updated 2 ಫೆಬ್ರುವರಿ 2026, 20:44 IST
<div class="paragraphs"><p>ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

ಬೆಂಗಳೂರು: ‘ರಾಜ್ಯಪಾಲರು ಪೂರ್ತಿ ಭಾಷಣ ಓದದೆ, ‘ಜೈ ಸಂವಿಧಾನ’ ಎನ್ನುವುದನ್ನೂ ಉಲ್ಲೇಖಿಸದೆ, ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಆತುರಾತುರವಾಗಿ ಹೋದರು. ಇದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ವಿಧಾನ ಸಭೆಯಲ್ಲಿ ಉತ್ತರಿಸಿದ ಅವರು, ‘ರಾಜ್ಯಪಾಲರು ಮೂಲತ: ಉತ್ತಮ ವ್ಯಕ್ತಿಯೇ. ನಾವು ರಾಜ್ಯಪಾಲರ ವಿರುದ್ಧವಿಲ್ಲ. ಆದರೆ, ಕೇಂದ್ರ ಸರ್ಕಾರದ ವಿರುದ್ಧ’ ಎಂದರು.

ADVERTISEMENT

ರಾಜ್ಯಪಾಲರ ಭಾಷಣದ ಕುರಿತು ‘ಪ್ರಜಾವಾಣಿ’ಯೂ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳು ಬರೆದಿದ್ದ ಸಂಪಾದಕೀಯದ ಸಾಲುಗಳನ್ನು ಓದಿದ ಮುಖ್ಯಮಂತ್ರಿ, 'ರಾಜ್ಯಪಾಲರು ಸರ್ಕಾರದ ಭಾಷಣ ಓದದೇ ಇರಲು ಸಂವಿಧಾನದಲ್ಲಿ ಆಯ್ಕೆಯಿಲ್ಲ. ರಾಜ್ಯಪಾಲರ ನಡವಳಿಕೆ ಅವರ ಘನತೆಗೆ ತಕ್ಕುದಾದುದಲ್ಲ. ಅಧಿವೇಶನ ಐತಿಹಾಸಿಕ ಕಳಂಕಕ್ಕೆ ಸಾಕ್ಷಿಯಾಯಿತು. ರಾಜ್ಯಪಾಲರು ರಾಜಕೀಯ ಏಜೆಂಟ್ ರಂತೆ ವರ್ತಿಸುತ್ತಿರುವುದೇ ಇದಕ್ಕೆ ಕಾರಣ ಎಂಬಿತ್ಯಾದಿ ಸಂಪಾದಕೀಯಗಳು ಪ್ರಕಟವಾಗಿದ್ದವು’ ಎಂದರು.

‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಕಡಿತದ ಬಗ್ಗೆ ನಾನು ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಕೇಂದ್ರ ವಿತ್ತ ಸಚಿವರನ್ನು ಈ ಸಂಬಂಧ ಭೇಟಿ ಮಾಡಲಾಗಿದೆ. ಜಿಎಸ್‌ಟಿ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಮಂಡಿಸಿದರೂ, ಅದನ್ನು ಪರಿಗಣಿಸಲಾಗಿಲ್ಲ’ ಎಂದು ದೂರಿದರು.

‘ಹಿಂದುಳಿದ ವರ್ಗದವರ ಬಗ್ಗೆ ಕಾಳಜಿಯಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿ 2013–2018 ರವರೆಗೆ 543 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗಿದೆ. ನಂತರ ಬಂದ ಬಿಜೆಪಿ ಸರ್ಕಾರ‌ (2019ರಿಂದ 2023) ಕೇವಲ ಐದು ಹಾಸ್ಟೆಲ್‌ಗಳನ್ನು ನಿರ್ಮಿಸಿದೆ. ಕಾಂಗ್ರೆಸ್ ಸರ್ಕಾರ 2023-24ರಿಂದ ಇಲ್ಲಿಯವರೆಗೆ 220 ಹಾಸ್ಟೆಲ್ ನಿರ್ಮಿಸಿದೆ. ನಮ್ಮ ಸರ್ಕಾರ 14.52 ಲಕ್ಷ ಮನೆಗಳನ್ನು ನಿರ್ಮಿಸಿದೆ. ಬಿಜೆಪಿ ಅವಧಿಯಲ್ಲಿ ಕೇವಲ 5 ಲಕ್ಷ ಮನೆಗಳಾಗಿವೆ. ಈ ಎಲ್ಲ ಸತ್ಯಾಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು’ ಎಂದರು.

ಮುಖ್ಯಮಂತ್ರಿಯ ಉತ್ತರವನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡುತ್ತಿದ್ದಂತೆ, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವಕ್ಕೆ ಸದನ ಒಪ್ಪಿಗೆ ನೀಡಿತು.

‘ಎಲ್ಲರೂ ಸಂವಿಧಾನ ಒಪ್ಪಲೇಬೇಕು’
‘ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧ ಪಕ್ಷದವರ ಮತ್ತು ಸರ್ಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ. ನಾವಿಬ್ಬರೂ ಪರಸ್ಪರ ಒಪ್ಪಲೇಬೇಕೆಂಬ ಷರತ್ತಿಲ್ಲ. ಆದರೆ, ನಾವೆಲ್ಲರೂ ಸಂವಿಧಾನ ಒಪ್ಪಲೇಬೇಕು. ಸಂವಿಧಾನಬದ್ಧವಾಗಿ ಸರ್ಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ಗ್ರಾಮೀಣಾಭಿವೃದ್ಧಿಗೆ ನರೇಗಾ ಸಂಜೀವಿನಿ ಎಂದು ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಹೇಳಿದ್ದರು. ಈಗ ಇದ್ದಕ್ಕಿದ್ದ ಹಾಗೇ ವಿರೋಧಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.