ADVERTISEMENT

ಹಿಂದುಳಿದ ವರ್ಗಗಳಿಗೆ ಮೀಸಲಾತಿಯೊಂದಿಗೆ ಚುನಾವಣೆ ನಡೆಸಿ: ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮೇ 2022, 7:26 IST
Last Updated 11 ಮೇ 2022, 7:26 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಖಾತರಿಪಡಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿರುವ ಆದೇಶದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಪರಿಹಾರ ಪಡೆಯಲು ಸರ್ಕಾರ ಮುಂದಾಗಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಖಾತರಿಪಡಿಸಿ, ಅದರ ಆಧಾರದಲ್ಲಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಅನುಮತಿ ಕೋರುವುದೊಂದೇ ಈಗ ಇರುವ ಮಾರ್ಗವಾಗಿದೆ ಎಂದಿದ್ದಾರೆ.

ಈ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಸರ್ಕಾರ ತಕ್ಷಣ ಸಜ್ಜಾಗಬೇಕು. ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗವು ಸಂಗ್ರಹಿಸಿರುವ ವಿಶ್ವಾಸಾರ್ಹ ದತ್ತಾಂಶಗಳನ್ನು ಬಳಸಿಕೊಂಡು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳ ಜನರ ರಾಜಕೀಯ ಹಿಂದುಳಿದಿರುವಿಕೆಯನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗದಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಮೀಸಲಾತಿ ನೀಡಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಹಿಂದೆಯೇ ಹೇಳಿತ್ತು. ಈಗ ಅದೇ ಮಾತನ್ನು ಪುನರುಚ್ಛರಿಸಿದೆ. ಈ ಆದೇಶ ದೇಶದಾದ್ಯಂತ ಅನ್ವಯ ಆಗಲಿದೆ ಎಂಬುದನ್ನೂ ಮತ್ತೊಮ್ಮೆ ಹೇಳಿದೆ. ಆದರೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗದಿರುವುದು ವಿಷಾದನೀಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರತಿ ಮನೆಯನ್ನೂ ತಲುಪಿ ಮಾಹಿತಿ ಸಂಗ್ರಹಿಸಿದೆ. ಆ ಮೂಲಕ ಅತ್ಯಂತ ವಿಶ್ವಾಸಾರ್ಹ ದತ್ತಾಂಶಗಳನ್ನು ಸಂಗ್ರಹಿಸಿದೆ. ಈ ರೀತಿಯ ಪ್ರಕ್ರಿಯೆ ದೇಶದ ಬೇರೆ ಯಾವ ರಾಜ್ಯಗಳಲ್ಲೂ ನಡೆದಿಲ್ಲ. ಈಗ ಲಭ್ಯವಿರುವ ದತ್ತಾಂಶಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆ ಗುರುತಿಸಲು ನೇಮಿಸಿರುವ ಆಯೋಗಕ್ಕೆ ಸಲ್ಲಿಸಿ, 15 ದಿನಗಳೊಳಗೆ ವರದಿ ಪಡೆದು ಹಿಂದುಳಿದ ವರ್ಗಗಳಿಗೆ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲು ಸಾಧ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಆದೇಶವೇ ಹೇಳುತ್ತಿದೆ. ಆ ಪ್ರಕಾರವಾಗಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶದಿಂದ ಸಾಮಾಜಿಕ ನ್ಯಾಯದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಕೈಮೀರಿಹೋಗುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವಿಫಲವಾದರೆ ಮುಂದಿನ ಬೆಳವಣಿಗೆಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.