ADVERTISEMENT

ಅನ್ನಭಾಗ್ಯಕ್ಕೆ ದುಡ್ಡು ಇಡದ ಸಿದ್ದರಾಮಯ್ಯ: ಎಚ್‌.ಡಿ ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 18:54 IST
Last Updated 16 ಸೆಪ್ಟೆಂಬರ್ 2021, 18:54 IST
ಸಿದ್ದರಾಮಯ್ಯ ಮತ್ತು ಎಚ್‌.ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಮತ್ತು ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ‘ಮೈತ್ರಿ ಸರ್ಕಾರ ಬಂದಾಗ ಜನರಿಗೆ ಐದು ಕೆ.ಜಿ ಅಕ್ಕಿ ನೀಡಲಾಯಿತು. ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರು ದೊಡ್ಡ ಹುಯಿಲೆಬ್ಬಿಸಿದರು. ಐದು ಕೆ.ಜಿ ಬದಲು ಏಳು ಕೆ.ಜಿಯನ್ನೇ ಕೊಡಬೇಕು ಎಂದು ಹಟಕ್ಕೆ ಬಿದ್ದರು. ಆದರೆ, ಹಣಕಾಸು ಲಭ್ಯತೆ ನೋಡಿದರೆ ಐದು ಕೆ.ಜಿ ಅಕ್ಕಿಗೆ ಮಾತ್ರ ಹಣ ತೆಗೆದಿರಿಸಲಾಗಿತ್ತು’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಉಳಿದ ಎರಡು ಕೆ.ಜಿ ಅಕ್ಕಿಗೆ ಹಣ ತರುವುದು ಎಲ್ಲಿಂದ? ಚುನಾವಣೆಗೆ ಹೋಗುವ ಮುನ್ನ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿ ಐದು ಕೆ.ಜಿ ಅಕ್ಕಿಗಷ್ಟೇ ಹಣ ಇಟ್ಟಿದ್ದರು. ಸಮ್ಮಿಶ್ರ ಸರ್ಕಾರ ಬಂದಾಗ ಇದೇ ಜನ ಏಳು ಕೆ.ಜಿ ಅಕ್ಕಿ ಕೊಡಬೇಕು ಎಂದು ಬೊಬ್ಬೆ ಹೊಡೆದರು. ಚುನಾವಣೆಯಲ್ಲಿ ಮತ ಪಡೆಯಲು ಅವರು ಮಾಡಿದ ಕೆಲಸಕ್ಕೆ ಜನರು ನಮ್ಮನ್ನು ಟೀಕಿಸುವಂತಾಯಿತು’ ಎಂದರು.

‘ಈ ಸತ್ಯ ನಮಗೆ ಗೊತ್ತಿರಲಿಲ್ಲ’ ಎಂದು ಸಚಿವ ಆರ್‌.ಅಶೋಕ ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು 17 ಲಕ್ಷ ಮನೆಗಳ ನಿರ್ಮಾಣಕ್ಕೆ ₹29 ಸಾವಿರ ಕೋಟಿಯ ಯೋಜನೆ ರೂಪಿಸಿದರು. ಆದರೆ, ಬಜೆಟ್‌ನಲ್ಲಿ ಇಟ್ಟಿದ್ದು ₹2,900 ಕೋಟಿ ಮಾತ್ರ. ಹೀಗಾಗಿ, ಮೂರು ವರ್ಷಗಳಿಂದ ಜನರಿಗೆ ಒಂದೇ ಒಂದು ಮನೆ ವಿತರಿಸಲು ಸಾಧ್ಯವಾಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ಸಿದ್ದರಾಮಯ್ಯ ಅವರು ಅನಿಲಭಾಗ್ಯ ಯೋಜನೆ ಪ್ರಕಟಿಸಿದರು. 1 ಲಕ್ಷ ಕುಟುಂಬಗಳಿಗೆ ವಿತರಿಸಲು ಎಂಎಸ್‌ಐಎಲ್‌ ಮೂಲಕ ಗ್ಯಾಸ್‌ ಸ್ಟವ್‌ಗಳನ್ನು ಖರೀದಿಸಿದರು. ಸ್ಟವ್‌ಗಳು ಗೋಡೌನ್‌ನಲ್ಲೇ ಉಳಿದವು. ನಾನು ಸಿ.ಎಂ ಆಗಿದ್ದಾಗ ಯೋಜನೆಯ ಪ್ರಗತಿ ಪರಿಶೀಲಿಸಿದೆ. ಈ ಕುಟುಂಬಗಳಿಗೆ ಅನಿಲ ಸಿಲಿಂಡರ್‌ ಒದಗಿಸಲು 10 ವರ್ಷ ಬೇಕು ಎಂದು ಅನಿಲ ಕಂಪನಿಗಳ ಮುಖ್ಯಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು. ವಿವೇಚನೆ ಇಲ್ಲದೆ ಮಾಡುವ ಯೋಜನೆಗಳ ಪರಿಣಾಮ ಇದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.