ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕರ್ನಾಟಕ ಕಾಂಗ್ರೆಸ್ ಈಗ ಒಡೆದ ಮನೆಯಂತಾಗಿದೆ. ಒಂದಷ್ಟು ಬಣ ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದರೆ, ಭ್ರಷ್ಟಾಧ್ಯಕ್ಷ ಡಿಕೆಶಿ ಮಾತ್ರ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಣ ಡಿ.ಕೆ.ಶಿವಕುಮಾರ್ ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲವೇಕೆ?’ ಎಂದು ಕೇಳಿದೆ.
‘ಮಹಡಿ ಹತ್ತಲು ಆಗದವರು, ಬೆಟ್ಟ ಹತ್ತುವ ಕನಸು ಕಂಡರಂತೆ. ತಮ್ಮ ಬೆಂಬಲಿಗರ ಮೂಲಕ ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳುವ ಅವರು ಈಗ ಚುನಾವಣೆ ನಡೆದರೂ ಬದಾಮಿಯಲ್ಲಿ ಸೋಲುವುದು ಖಚಿತ, ಇದು ವಾಸ್ತವ. ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ’ ಎಂದು ಬಿಜೆಪಿ ಟ್ವೀಟಿಸಿದೆ.
‘ಒಂದೆಡೆ ಶಾಸಕರ ಅಭಿಪ್ರಾಯ ತೆಗೆದುಕೊಂಡು, ಹೈಕಮಾಂಡ್ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಹೇಳುವ ಸಿದ್ದರಾಮಯ್ಯ ಮತ್ತೊಂದೆಡೆ ಬೆಂಬಲಿಗರ ಮೂಲಕ ‘ಮುಂದಿನ ಸಿಎಂ ಸಿದ್ದರಾಮಯ್ಯʼ ಎಂದು ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕುವ ಪೂರ್ವನಿಯೋಜಿತ ರಣತಂತ್ರದ ಭಾಗವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.